ಬೆಂಗಳೂರು (Bengaluru)-ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಮತ್ತು ಅವರ ಸ್ನೇಹಿತರಿಂದ ಈವರೆಗೆ 2.46 ಕೋಟಿ ರೂ. ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಿರುವ ಹಣದ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ), ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಆರೋಪಿಗಳ ಮನೆ ಹಾಗೂ ಇತರೆಡೆ ಮೇಲಿಂದ ಮೇಲೆ ದಾಳಿ ಮಾಡುತ್ತಿದ್ದಾರೆ. ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ ಸ್ಟೇಬಲ್ ಶ್ರೀಧರ್ ಬಳಿ 2.16 ಕೋಟಿ ರೂ. ಸಿಕ್ಕಿದೆ. ಉಳಿದಂತೆ, ಮಧ್ಯವರ್ತಿ ಕೇಶವಮೂರ್ತಿ ಮನೆಯಲ್ಲಿ 30 ಲಕ್ಷ ರೂ. ಜಪ್ತಿ ಮಾಡಲಾಗಿದೆ.
ಪಿಎಸ್‌ಐ ಹುದ್ದೆಗೆ ಅಭ್ಯರ್ಥಿಗಳನ್ನು ಅಕ್ರಮವಾಗಿ ಆಯ್ಕೆ ಮಾಡಲು ನೇಮಕಾತಿ ವಿಭಾಗದ ನೌಕರರು ಹಾಗೂ ಇತರರು, ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅವರು ಹಣದ ಬಗ್ಗೆ ಮಾಹಿತಿ ಬಾಯ್ಬಿಡುತ್ತಿದ್ದಾರೆ. ಅದರನ್ವಯ ದಾಳಿ ಮಾಡಿ, ನಗದು ಜಪ್ತಿ ಮಾಡಲಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪ್ರಕರಣದ ರೂವಾರಿ ಎನ್ನಲಾದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಪೊಲೀಸ್ ಪ್ರಧಾನ ಕಚೇರಿ ಸೂಪರಿಂಟೆಂಡೆಂಟ್ ಮಂಜುನಾಥ್ ವಿಚಾರಣೆ ಮುಂದುವರಿದಿದೆ. ಅಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾದ ಕೆಲವರ ಹೆಸರುಗಳನ್ನು ಅವರು ಬಾಯ್ಬಿಟ್ಟಿದ್ದಾರೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಐಡಿ ಮೂಲಗಳಿಂದ ತಿಳಿದುಬಂದಿದೆ.
2011ರಿಂದಲೇ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಮಾಹಿತಿ ಇದೆ. ಸದ್ಯ 545 ಹುದ್ದೆಗಳ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆದಿದೆ. ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉಳಿದ ನೇಮಕಾತಿ ಅಕ್ರಮ ಬಗ್ಗೆಯೂ ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿವೆ.