ಮನೆ ರಾಜ್ಯ ಪಿಎಸ್‌ ಐ ಹಗರಣ: ಹಾಸನದ ಮೂವರ ಬಂಧನ

ಪಿಎಸ್‌ ಐ ಹಗರಣ: ಹಾಸನದ ಮೂವರ ಬಂಧನ

0

ಹಾಸನ (Hassan)-ಪಿಎಸ್‌ ಐ ಹಗರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಮೂವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಶ್ರವಣಬೆಳಗೊಳ ತಾಲೂಕಿನ ಬೆಕ್ಕ ಗ್ರಾಮಪಂಚಾಯಿತಿಯ ಕೇಶವ, ನಾರಾಯಣಪ್ಪ ಮತ್ತು ಪರೀಕ್ಷೆ ಬರೆದಿದ್ದ ಆತನ ಮಗ ವೇಣುಗೋಪಾಲ ರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಕೇಶವ ಅವರ ಸಂಬಂಧಿಕರೊಬ್ಬರು ಈ ಹಿಂದೆ ಹಾಸನದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ ಈಗ ಮತ್ತೊಬ್ಬ ಸಂಬಂಧಿಕ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಮತ್ತೊಬ್ಬ ಮಹಿಳಾ ಸಂಬಂಧಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗಾಗಿ ಕೇಶವ ಅವರ ಕುಟುಂಬದ ಸಾಕಷ್ಟು ಮಂದಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಪರೀಕ್ಷೆ ಬರೆದಿದ್ದ ವೇಣುಗೋಪಾಲ್, ಆಯ್ಕೆ ಪ್ರಕ್ರಿಯೆಯಲ್ಲಿ ಕೇಶವ ಎಂಬುವವರು ಹಣದ ಮೂಲಕ ಡೀಲ್ ಮಾಡಿ ಪರೀಕ್ಷೆ ಪಾಸು ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಪಿಎಸ್ಐ ಹಗರಣದ ನಂಟು ಈಗ ಹಾಸನಕ್ಕೂ ಅಂಟಿದ್ದು, ಹಾಸನ ಜಿಲ್ಲೆಯ ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ಈ ಪ್ರಕರಣದಲ್ಲಿ ಜಿಲ್ಲೆಯ ಇನ್ನೆಷ್ಟು ಜನ ಸಿಕ್ಕಿಬಿಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಪಿಎಸ್ಐ ಹಗರಣದಲ್ಲಿ ದಿನದಿಂದ ದಿನಕ್ಕೆ ಒಬ್ಬಬ್ಬರು ಸಿಐಡಿ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದಾರೆ. ಅದೇ ರೀತಿ ಹಾಸನ ಜಿಲ್ಲೆಯಲ್ಲಿ ಕೂಡ ಪಿಎಸ್ಐ ಹಗರಣದ ಕಿಂಗ್ ಪಿನ್ ಇದ್ದಾರೆ ಎಂಬ ಮಾಹಿತಿಯನ್ನು ಮೂರು ದಿನದ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾರ್ಮಿಕವಾಗಿ ನುಡಿದಿದ್ದರು.