ಮಂಡ್ಯ(Mandya): ಕಾವೇರಿ ನದಿಯಲ್ಲಿ ಯುವಕನೋರ್ವ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಶ್ರೀರಂಗಪಟ್ಟಣ ತಾಲೂಕು ಆಡಳಿತ ಆದೇಶಿಸಿದೆ.
ಕಾವೇರಿ ಜಲಾಶಯದಲ್ಲಿ ಒಳಹರಿವಿನ ಮಟ್ಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನದಿಗೆ ನೀರು ಹರಿಬಿಡಲಾಗಿದೆ. ಪರಿಣಾಮ ಕಾವೇರಿ ತೀರ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಬುಧವಾರ ಬೆಳಗ್ಗೆ ಯಲಹಂಕ ಮೂಲದ ಅಶೋಕ್ (26) ಎಂಬುವವರು, ತನ್ನ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಸಂಗಮಕ್ಕೆ ಬಂದಿದ್ದರು. ಪೂಜೆಗೆ ಮುನ್ನ ನದಿಯಲ್ಲಿ ಕಾಲು ತೊಳೆಯುವ ವೇಳೆ ಕಾಲು ಜಾರಿ ಬಿದ್ದು, ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ನದಿಯಲ್ಲಿ ಅಸ್ತಿ ಬಿಡುವುದಕ್ಕೂ ನಿರ್ಬಂಧ ವಿಧಿಸಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ ಆದೇಶ ಹೊರಡಿಸಿದ್ದಾರೆ.
ಪ್ರವಾಸಿ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಗಮ ರಸ್ತೆಯನ್ನೇ ಬಂದ್ ಮಾಡಲಾಗಿದ್ದು, ಪ್ರವಾಸಿಗರನ್ನು ಬ್ಯಾರಿಕೇಡ್ ಬಳಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ.