ಮನೆ ರಾಷ್ಟ್ರೀಯ ಪುಲ್ವಾಮಾ ದಾಳಿಗೆ 4 ವರ್ಷ: ವೀರ ಯೋಧರಿಗೆ ಗಣ್ಯರ ಗೌರವ ನಮನ

ಪುಲ್ವಾಮಾ ದಾಳಿಗೆ 4 ವರ್ಷ: ವೀರ ಯೋಧರಿಗೆ ಗಣ್ಯರ ಗೌರವ ನಮನ

0

ನವದೆಹಲಿ: ಜಮ್ಮು–ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌’ಪಿಎಫ್‌ ಯೋಧರ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಗೆ ಇಂದಿಗೆ (ಫೆ.14) ನಾಲ್ಕು ವರ್ಷಗಳು ಸಂದ ಹಿನ್ನಲೆಯಲ್ಲಿ ಹುತಾತ್ಮರಾದ ಯೋದರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದಾದ್ಯಂತ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಟ್ವೀಟ್‌ ಮಾಡಿ, ಪುಲ್ವಾಮಾದಲ್ಲಿ ಈ ದಿನ ನಾವು ಕಳೆದುಕೊಂಡ ವೀರ ಯೋಧರನ್ನು ನೆನಪಿಸಿಕೊಳ್ಳುತ್ತೇವೆ. ಅವರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯ ಬಲಿಷ್ಠ ಮತ್ತು ಸಮೃದ್ಧ ದೇಶ ಕಟ್ಟಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

2019ರ ಈ ದಿನ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ಗೌರವ ಸಲ್ಲಿಸುತ್ತೇನೆ. ಯೋಧರ ಧೈರ್ಯ ಮತ್ತು ತ್ಯಾಗಕ್ಕೆ ದೇಶವೇ ನಮಿಸುತ್ತದೆ. ಇಡೀ ದೇಶ ಹುತಾತ್ಮ ಯೊಧರ ಕುಟುಂಬದೊಂದಿಗೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿ ಸೈನಿಕರಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ. ಹುತಾತ್ಮ ಯೋಧರ ಶೌರ್ಯ, ತ್ಯಾಗ, ಅದಮ್ಯ ಧೈರ್ಯ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವಾಗಲೂ ಸ್ಫೂರ್ತಿಯಾಗಿ ಉಳಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.