ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಭಾನುವಾರ ಬೆಳಗ್ಗೆ ಪತನಗೊಂಡಿದ್ದು, ವಿಮಾನದಲ್ಲಿದ್ದ ಟ್ರೈನಿ ಪೈಲಟ್ ಮತ್ತು ಬೋಧಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆ: ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಭಾನುವಾರ ಬೆಳಗ್ಗೆ ಪತನಗೊಂಡಿದ್ದು, ವಿಮಾನದಲ್ಲಿದ್ದ ಟ್ರೈನಿ ಪೈಲಟ್ ಮತ್ತು ಬೋಧಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾರಾಮತಿ ತಾಲೂಕಿನ ಗೋಜುಬಾವಿ ಗ್ರಾಮದ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ವಿಮಾನ ಪತನಗೊಂಡಿದೆ.
‘ರೆಡ್ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಗೋಜುಬಾವಿ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಟ್ರೈನಿ ಪೈಲಟ್ ಮತ್ತು ಬೋಧಕ ಗಾಯಗೊಂಡಿದ್ದಾರೆ. ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಬಾರಾಮತಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಪ್ರಭಾಕರ್ ಮೋರೆ ತಿಳಿಸಿದ್ದಾರೆ.
‘ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.
ನಾಲ್ಕು ದಿನಗಳಲ್ಲಿ ಸಂಭವಿಸಿರುವ ಎರಡನೇ ಘಟನೆ ಇದಾಗಿದೆ. ಗುರುವಾರ ಸಂಜೆ, ಅಕಾಡೆಮಿಯ ತರಬೇತಿ ವಿಮಾನವು ಬಾರಾಮತಿ ತಾಲೂಕಿನ ಕಫ್ತಾಲ್ ಗ್ರಾಮದ ಬಳಿ ಪತನಗೊಂಡಿದ್ದು, ಪೈಲಟ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ಸ್ಥಳವು ಬಾರಾಮತಿ ಏರ್ಫೀಲ್ಡ್ನಿಂದ ಉತ್ತರಕ್ಕೆ 2 ಮೈಲುಗಳಷ್ಟು ದೂರದಲ್ಲಿದೆ. ಬೋಧಕ ಮತ್ತು ಟ್ರೇನಿ ಇಬ್ಬರೂ ಸುರಕ್ಷಿತವಾಗಿದ್ದಾರೆ. ಡಿಎಎಸ್ (ಮುಂಬೈ) ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ’ ಎಂದು ಡಿಜಿಸಿಎ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.