ಪಿಆರ್’ಕೆ ಪ್ರೊಡಕ್ಷನ್ಸ್ ನಡಿ, ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ತಯಾರಿಸಿದ್ದ ಡಾಕ್ಯೂ ಫಿಲಂ ‘ಗಂಧದಗುಡಿ’ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಚಿತ್ರದ ಟ್ರೇಲರ್ ಈಗಾಗಲೇ ಒಂದು ಕೋಟಿ ವೀಕ್ಷಣೆಯನ್ನು ದಾಟಿದ್ದು, ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲು ದೊಡ್ಮನೆ ಸಜ್ಜಾಗಿದ್ದು, ಸಿದ್ಧತೆ ಆರಂಭಿಸಿದೆ.
`ಪುನೀತಪರ್ವ’ ಹೆಸರಿನಲ್ಲಿ ಅ.21ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ನೂರಾರು ಗಣ್ಯರು ಭಾಗವಹಿಸಲಿದ್ದಾರೆ.
ಮಂಗಳವಾರ ಪಿಆರ್‌ಕೆ ಪ್ರೊಡಕ್ಷನ್ಸ್ ಮುಖ್ಯಸ್ಥೆ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟರಾದ ರಾಘವೇಂದ್ರ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಜೊತೆಗೂಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ವಿಶೇಷ ಆಹ್ವಾನಪತ್ರಿಕೆಯನ್ನೂ ತಯಾರಿಸಲಾಗಿದೆ.
`ಗಂಧದಗುಡಿ’ ಪುನೀತ್ ಅವರ ಕನಸಾಗಿತ್ತು. ಪುನೀತ್ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಕೊನೆಯ ಚಿತ್ರ ಇದಾಗಿದೆ. ಈ ಡಾಕ್ಯೂಫಿಲಂ ಅ.28ರಂದು ಬಿಡುಗಡೆಯಾಗುತ್ತಿದ್ದು, ತೆರೆಯ ಮೇಲೆ ‘ಮ್ಯಾನ್ ವಿದ್ ವೈಲ್ಡ್’ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.