ಮನೆ ಕಾನೂನು ಮಹಿಳೆಯರ ವಿರುದ್ಧದ ಪ್ರತಿ ಅಪರಾಧವನ್ನು ‘ಲವ್‌ ಜಿಹಾದ್‌’ನೊಂದಿಗೆ ಬೆಸೆಯುತ್ತಿದ್ದ ಹಿಂದಿ ಸುದ್ದಿ ವಾಹಿನಿಗಳಿಗೆ ದಂಡ

ಮಹಿಳೆಯರ ವಿರುದ್ಧದ ಪ್ರತಿ ಅಪರಾಧವನ್ನು ‘ಲವ್‌ ಜಿಹಾದ್‌’ನೊಂದಿಗೆ ಬೆಸೆಯುತ್ತಿದ್ದ ಹಿಂದಿ ಸುದ್ದಿ ವಾಹಿನಿಗಳಿಗೆ ದಂಡ

0

ಸುದ್ದಿ ಕಾರ್ಯಕ್ರಮಗಳ ಮೂಲಕ ದ್ವೇಷ ಮತ್ತು ಕೋಮು ಹಗೆತನ ಹರಡಿದ್ದಕ್ಕಾಗಿ ಹಿಂದಿ ಸುದ್ದಿ ವಾಹಿನಿಗಳಾದ ಆಜ್ ತಕ್, ಟೈಮ್ಸ್ ನೌ ನವಭಾರತ್ ಹಾಗೂ ನ್ಯೂಸ್ 18 ಇಂಡಿಯಾ ವಿರುದ್ಧ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಕ್ರಮ ಕೈಗೊಂಡಿದೆ.

ಈ ಸುದ್ದಿವಾಹಿನಿಗಳಲ್ಲಿನ ಕಾರ್ಯಕ್ರಮಗಳು ನಿರ್ದಿಷ್ಟ ಸಮುದಾಯವನ್ನು (ಮುಸ್ಲಿಮರನ್ನು) ಗುರಿಯಾಗಿಸಿಕೊಂಡು ‘ಲವ್ ಜಿಹಾದ್’ ಮತ್ತು ಕೋಮು ಹಿಂಸಾಚಾರದಂತಹ ವಿಷಯಗಳನ್ನು ಚರ್ಚಿಸುತ್ತಿವೆ ಎಂದು ಸಾಮಾಜಿಕ ಹೋರಾಟಗಾರರಾದ ಇಂದ್ರಜಿತ್‌ ಘೋರ್ಪಡೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪುರಸ್ಕರಿಸಿರುವ ಎನ್‌ಬಿಡಿಎಸ್‌ಎ ಅಧ್ಯಕ್ಷರಾದ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರು ಟೈಮ್ಸ್ ನೌ ನವಭಾರತ್‌ಗೆ ರೂ 1,00,000 ಹಾಗೂ ನ್ಯೂಸ್ 18 ಇಂಡಿಯಾಗೆ ರೂ 50,000 ದಂಡ ವಿಧಿಸಿದ್ದಾರೆ. ಜೊತೆಗೆ ಆಕ್ಷೇಪಾರ್ಹ ಕಾರ್ಯಕ್ರಮಗಳ ಆನ್‌ಲೈನ್‌ ಆವೃತ್ತಿಗಳನ್ನು ಏಳು ದಿನದೊಳಗೆ ತೆಗೆದುಹಾಕುವಂತೆ ಈ ಮೂರೂ ಚಾನೆಲ್‌ಗಳಿಗೆ ಸೂಚಿಸಲಾಗಿದೆ.

ಮೂರೂ ಸುದ್ದಿವಾಹಿನಿಗಳ ವಿರುದ್ಧ ಪ್ರಾಧಿಕಾರ ಪ್ರತ್ಯೇಕ ಆದೇಶಗಳನ್ನು ನೀಡಿದೆ. ಆಜ್ ತಕ್‌ನ ನಿರೂಪಕ ಬಿಹಾರದ ನಳಂದದಲ್ಲಿ ನಡೆದ ಹಿಂಸಾಚಾರಕ್ಕೆ ಮುಸ್ಲಿಮರನ್ನು ದೂಷಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

“ಬಿಹಾರದ ನಳಂದದಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಗಿದ್ದು, ಮಸೀದಿಯ ಸುತ್ತಮುತ್ತಲಿನ ಮುಸ್ಲಿಂ ಅಂಗಡಿಗಳು ಮತ್ತು ಮನೆಗಳನ್ನು ಸಹ ಸುಟ್ಟುಹಾಕಲಾಗಿದೆ ಮತ್ತು ಹಾಗೆ ದಾಂಧಲೆ ನಡೆಯುತ್ತಿದ್ದಾಗ ಪೊಲೀಸರು ಹಲವು ಗಂಟೆಗಳ ಕಾಲ ಬರಲಿಲ್ಲ. ಅವರು ಬಂದಾಗ ಮುಸ್ಲಿಂ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ಮನೆ ಲೂಟಿ ಮಾಡಿದರು ಎಂದು ಉಲ್ಲೇಖಿಸಲು ನಿರೂಪಕ ವಿಫಲರಾಗಿದ್ದಾರೆ. ” ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಬೇರೆಯವರು ಪ್ರವೇಶಿಸಲು ಅವಕಾಶ ಇಲ್ಲದಂತಹ ಮುಸ್ಲಿಂ ಪ್ರದೇಶಗಳು ಭಾರತದಲ್ಲಿ ಇವೆ ಎಂದು ಪ್ರಸಾರದ ವೇಳೆ ನಿರೂಪಕ ಹೇಳಿದ್ದರು ಎಂಬುದಾಗಿ ದೂರುದಾರ ಹೇಳಿದ್ದರು.

2022 ರಲ್ಲಿ ಕ್ರೂರವಾಗಿ ಕೊಲೆಯಾದ ಶ್ರದ್ಧಾ ವಾಲ್ಕರ್‌ ಅವರನ್ನು “ಲವ್ ಜಿಹಾದ್” ಉದಾಹರಣೆ ಎಂದು ನಿರೂಪಕ ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಲಾಗಿತ್ತು.

ಕೋಮು ಹಿಂಸಾಚಾರದ ಘಟನೆಗಳಿಗೆ ಮಾತ್ರ ಪ್ರಸಾರಕರು ತಮ್ಮ ವಿಶ್ಲೇಷಣೆ ಸೀಮಿತಗೊಳಿಸಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ ಎಂದು ಎನ್‌ಬಿಡಿಎಸ್‌ಎ ಹೇಳಿದೆ.

ನಿರ್ದಿಷ್ಟ ಸಮುದಾಯದ ಪುರುಷರು ತಮ್ಮ ಧಾರ್ಮಿಕ ಗುರುತನ್ನು ಮರೆಮಾಚಿ ಮತ್ತೊಂದು ಸಮುದಾಯದ ಮಹಿಳೆಯರನ್ನು ಮೋಸಗೊಳಿಸುತ್ತಿದ್ದು, ಪರಿಣಾಮ ಅಂತಹ ಮಹಿಳೆಯರ ವಿರುದ್ಧ ಹಿಂಸಾಚಾರ ಅಥವಾ ಕೊಲೆಗಳು ನಡೆಯುತ್ತವೆ ಎಂದು ನಿರೂಪಕ ತಕ್ಷಣಕ್ಕೆ ತೀರ್ಮಾನಿಸಿದ್ದಾರೆ ಎಂದು ಅದು ತಿಳಿಸಿದೆ.

ಹಿಂದೂ ಹುಡುಗಿಯೊಬ್ಬಳು ಬೇರೆ ಧರ್ಮದ ಹುಡುಗನನ್ನು ಮದುವೆಯಾದ ಮಾತ್ರಕ್ಕೆ ಅಂತಹ ಹಿಂದೂ ಹುಡುಗಿಯನ್ನು ಮೋಸಗೊಳಿಸಲಾಗಿದೆ ಅಥವಾ ಮದುವೆಗೆ ಒತ್ತಾಯಿಸಲಾಗಿದೆ ಎಂಬುದು ಸಾಬೀತಾಗದ ಹೊರತು ಅದು ‘ಲವ್ ಜಿಹಾದ್’ ಗೆ ಸಮಾನವಾಗುವುದಿಲ್ಲ ಎಂದು ಪ್ರಾಧಿಕಾರ ವಿವರಿಸಿದೆ.

ತಮ್ಮ ಆಯ್ಕೆಯ ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆಸುವ ಹಕ್ಕು ಮಾಧ್ಯಮಗಳಿಗೆ ಇದ್ದರೂ, ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣಕ್ಕೆ ನಂಟು ಕಲ್ಪಿಸುವಾಗ ಪ್ರಸಾರಕರು ‘ಲವ್ ಜಿಹಾದ್’ ವಿಷಯದ ಬಗ್ಗೆ ವಿವಿಧ ಚರ್ಚೆ ನಡೆಸಿರುವುದು ಸೂಕ್ತವಲ್ಲ ಎಂದು ಅದು ಹೇಳಿದೆ.

“ಲವ್ ಜಿಹಾದ್” ಎಂಬ ಪದವನ್ನು ಸಾಂದರ್ಭಿಕವಾಗಿ ಬಳಸಬಾರದು ಮತ್ತು ಭವಿಷ್ಯದ ಪ್ರಸಾರಗಳಲ್ಲಿ ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದಿರುವ ಅದು ಧಾರ್ಮಿಕ ಏಕತಾನತೆ ಸೃಷ್ಟಿಸುವುದು ದೇಶದ ಜಾತ್ಯತೀತ ವ್ಯವಸ್ಥೆಯನ್ನು ನಾಶಪಡಿಸಬಹುದು. ಸಮುದಾಯಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಬಹುದು. ಧಾರ್ಮಿಕ ಅಸಹಿಷ್ಣುತೆ ಅಥವಾ ಅರಾಜಕತೆಗೆ ಕಾರಣವಾಗಬಹುದು” ಎಂದು ಎನ್‌ಬಿಡಿಎಸ್‌ಎ ಎಚ್ಚರಿಕೆ ನೀಡಿದೆ.