ನಾಲ್ಕು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಮೃತಪಟ್ಟಿದ್ದ ನಿವೃತ್ತ ಸಿವಿಲ್ ನ್ಯಾಯಾಧೀಶರೊಬ್ಬರ ಪತ್ನಿಗೆ ಪಿಂಚಣಿ ಮತ್ತಿತರ ನಿವೃತ್ತಿ ಬಾಕಿ ಮೊತ್ತ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಈಚೆಗೆ ಪಂಜಾಬ್ ಹೈಕೋರ್ಟ್ ತನಗೆ ತಾನೇ ದಂಡ ವಿಧಿಸಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಧೀರ್ ಸಿಂಗ್ ಅವರಿದ್ದ ಪೀಠ, ವಿಳಂಬಕ್ಕಾಗಿ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್‌ನ ಆಡಳಿತಾತ್ಮಕ ವಿಭಾಗವನ್ನು (ಪ್ರತಿವಾದಿಗಳು) ತರಾಟೆಗೆ ತೆಗೆದುಕೊಂಡು ₹25,000 ದಂಡ ವಿಧಿಸಿತು.
“ಪ್ರತಿವಾದಿಗಳಿಗೆ ₹25,000 ದಂಡ ವಿಧಿಸಲಾಗುತ್ತಿದ್ದು, ಇದನ್ನು 60 ದಿನಗಳ ಅವಧಿಯಲ್ಲಿ ಅರ್ಜಿದಾರರಿಗೆ (ಮೃತ ನ್ಯಾಯಾಂಗ ಅಧಿಕಾರಿಯ ಪತ್ನಿ) ಪಾವತಿಸಬೇಕು, ಇಲ್ಲದಿದ್ದರೆ ಅರ್ಜಿಯ ವಿಲೇವಾರಿಗಾಗಿ ಸೂಕ್ತ ಪೀಠದ ಮುಂದೆ ಪಿಯುಡಿ ಆಗಿ ಸಲ್ಲಿಸಬೇಕು. ಎಷ್ಟು ಮೊತ್ತದ ದಂಡವನ್ನು ಪ್ರತಿವಾದಿಗಳು ಪರಸ್ಪರ ಪಾವತಿಸಬೇಕು ಎಂದು ವಿಭಜಿಸಿಕೊಳ್ಳುವ ನಿರ್ಧಾರವನ್ನು ಅವರಿಗೇ ಬಿಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.
ಪಿಂಚಣಿ ಮತ್ತಿತರ ಸವಲತ್ತುಗಳು ಸಂವಿಧಾನದ 300 ಎ ವಿಧಿಯ ಪ್ರಕಾರ ಕಾನೂನಿನ ಅಧಿಕಾರವಿಲ್ಲದೆ ವಂಚಿತರಾಗಲು ಸಾಧ್ಯವಿಲ್ಲದ ಆಸ್ತಿ ಎನಿಸಿಕೊಳ್ಳುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಮಾರ್ಚ್ 2018 ರಿಂದ ಮಾರ್ಚ್ 2024 ರವರೆಗೆ ನ್ಯಾಯಾಧೀಶರು ಮತ್ತು ಅವರ ಪತ್ನಿಗೆ ಪಿಂಚಣಿ ನಿರಾಕರಿಸಿರುವುದಕ್ಕೆ ಯಾವುದೇ ಕಾನೂನಿನ ಅಧಿಕಾರವಿಲ್ಲದಿರುವುದು ಮಾತ್ರವಲ್ಲದೆ ಕಾನೂನಿನೆಡೆಗಿನ ಸ್ಪಷ್ಟ ನಿರ್ಲಕ್ಷ್ಯವೂ ಆಗಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಬಗ್ಗೆ ಕನಿಷ್ಠ ಹೇಳಬಹುದಾದದ್ದು ಏನೆಂದರೆ ನ್ಯಾಯಾಂಗ ಅಧಿಕಾರಿಯ ಮರಣಾನಂತರ ಅವರನ್ನಾಗಲಿ ಅಥವಾ ಅವರ ಕುಟುಂಬವನ್ನಾಗಲೀ ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಂಡಿಲ್ಲ. ಪಿಂಚಣಿ ಸೌಲಭ್ಯ ನೀಡದೆ ಇದ್ದರೆ ಬಡ್ಡಿ ಮತ್ತು ದಂಡದೊಂದಿಗೆ ಅದನ್ನು ಪಾವತಿಸಲು ಸಂಬಂಧಪಟ್ಟವರು ಹೊಣೆಗಾರರಾಗಿರುತ್ತಾರೆ ಎಂಬುದು ಇತ್ಯರ್ಥಗೊಂಡ ಕಾನೂನಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ವಿವರಿಸಿತು.