ಮುಂಬೈ (Mumbai)-ಶಿಖರ್ ಧವನ್ (Shikhara Dhawan) ಅಜೇಯ ಅರ್ಧಶತಕ (88*) ಹಾಗೂ ಬೌಲರ್ ಗಳ ಉತ್ತಮ ಬೌಲಿಂಗ್ ನಿಂದ ಪಂಜಾಬ್ ಕಿಂಗ್ಸ್ (Panjab Kings) ತಂಡವು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ 11 ರನ್ ಅಂತರದ ಗೆಲುವು ದಾಖಲಿಸಿದೆ.
ಗೆಲುವಿನ ಹಾದಿಗೆ ಮರಳಿರುವ ಮಯಂಕ್ ಅಗರವಾಲ್ ಪಡೆ, ಎಂಟು ಪಂದ್ಯಗಳಲ್ಲಿ ನಾಲ್ಕನೇ ಗೆಲುವಿನೊಂದಿಗೆ ಎಂಟು ಅಂಕ ಸಂಪಾದಿಸಿ ಆರನೇ ಸ್ಥಾನಕ್ಕೇರಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ಶಿಖರ್ ಧವನ್ ಅವರ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು.
ಪಂಜಾಬ್ ನೀಡಿದ 188 ರನ್ ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಅಂಬಟಿ ರಾಯುಡು (78) ದಿಟ್ಟ ಹೋರಾಟದ ಹೊರತಾಗಿಯೂ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಸವಾಲಿನ ಮೊತ್ತ ಬೆನ್ನಟ್ಟಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ತಂಡವು 40 ರನ್ ಗಳಿಸುವಷ್ಟರಲ್ಲಿ ರಾಬಿನ್ ಉತ್ತಪ್ಪ (1), ಮಿಚೆಲ್ ಸ್ಯಾಂಟ್ನರ್ (9), ಶಿವಂ ದುಬೆ (8) ವಿಕೆಟ್‌ಗಳನ್ನು ಕಳೆದುಕೊಂಡಿತು.
ಈ ಪೈಕಿ 2016ರ ಬಳಿಕ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ರಿಷಿ ಧವನ್, ಫೇಸ್ ಶೀಲ್ಡ್ ಧರಿಸಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಅಲ್ಲದೆ ದುಬೆ ವಿಕೆಟ್ ಕಬಳಿಸಿ ಮಿಂಚಿದರು. 2016ರಲ್ಲಿ ರಣಜಿ ಟ್ರೋಫಿ ವೇಳೆ ರಿಷಿ ಗಾಯಗೊಂಡಿದ್ದರು.
ಅಂತಿಮ 5 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 70 ರನ್ ಅಗತ್ಯವಿತ್ತು. ಸಂದೀಪ್ ಶರ್ಮಾ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 23 ರನ್ ಬಾರಿಸಿದ ರಾಯುಡು ಅಬ್ಬರಿಸಿದರು.
ರಾಯುಡು ಹಾಗೂ ಜಡೇಜ 5ನೇ ವಿಕೆಟ್‌ಗೆ 32 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ 18ನೇ ಓವರ್‌ನಲ್ಲಿ ಔಟ್ ಆಗುವ ಮೂಲಕ ರಾಯುಡು ನಿರಾಸೆಗೊಳಗಾದರು. 39 ಎಸೆತಗಳನ್ನು ಎದುರಿಸಿದ ರಾಯುಡು ಏಳು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ಕಗಿಸೊ ರಬಾಡ ಹಾಗೂ ಅರ್ಶದೀಪ್ ಸಿಂಗ್ ನಿಖರ ದಾಳಿ ಮಾಡುವ ಮೂಲಕ ಚೆನ್ನೈ ಗೆಲುವಿನ ಪ್ರಯತ್ನಕ್ಕೆ ತಡೆಯೊಡ್ಡಿದರು.
ಕೊನೆಯ ಓವರ್‌ನಲ್ಲಿ ಗೆಲುವಿಗೆ 27 ರನ್ ಬೇಕಾಗಿತ್ತು. ಆದರೆ ಈ ಬಾರಿ ಫಿನಿಶರ್ ಮಹೇಂದ್ರ ಸಿಂಗ್ ಧೋನಿಗೆ (12) ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ ಎಸೆದ ರಿಷಿ ಧವನ್ ಮಗದೊಮ್ಮೆ ಪ್ರಭಾವಿ ಎನಿಸಿದರು.
ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರವೀಂದ್ರ ಜಡೇಜ 21 ರನ್ ಗಳಿಸಿ ಔಟಾಗದೆ ಉಳಿದರು. ಪಂಜಾಬ್ ಪರ ರಬಾಡ ಹಾಗೂ ರಿಷಿ ಧವನ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಅರ್ಶದೀಪ್ 23 ರನ್ ತೆತ್ತು ಒಂದು ವಿಕೆಟ್ ಗಳಿಸಿದರು.