ಮಂಡ್ಯ:ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಶುದ್ಧ ನಾಟಿ ಹಾಗೂ ದೇಶಿ ಸ್ಥಳೀಯ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿಯೂ ಆಗಿರುವ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗ್ರಾಮೀಣ ಭಾಷೆಯಲ್ಲಿ ಹೇಳುವಂತೆ ಅಪ್ಪಟ ಸ್ಥಳಿಕರನ್ನೇ ಅಭ್ಯರ್ಥಿ ಮಾಡಲಾಗುವುದು ಹೈಬ್ರೀಡ್ ಗೆ ಅವಕಾಶವಿಲ್ಲ ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಹುಲ್‍ಗಾಂಧಿ, ನರೇಂದ್ರ ಮೋದಿ ಸೇರಿದಂತೆ ಯಾರು,ಯಾವ ಜಿಲ್ಲೆಯಲ್ಲಾದರೂ ಚುನಾವಣೆಗೆ ಸ್ಪರ್ಧಿಸಬಹುದು.ಆದರೆ ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಸ್ಥಳೀಕರಿಗೆ ಅವಕಾಶ.ಕಳೆದ 30-40 ವರ್ಷಗಳ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ.ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಹಾಲಿ ಸಂಸದೆ ಸುಮಲತಾ ಅವರು ನಾನು ಕಾಂಗ್ರೆಸ್‍ಗೆ ಹೋಗುವುದಿಲ್ಲ, ಬಿಜೆಪಿಯಿಂದಲೇ ಸ್ರ್ಪಧಿಸುತ್ತೇನೆ, ಜೆಡಿಎಸ್‍ನವರು ಇಲ್ಲಿಗೆ ಬರುವುದು ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಕೂಡ ಸುಮಲತಾ ಅವರನ್ನು ಕರೆದಿಲ್ಲ. ಅವರು ಕಾಂಗ್ರೆಸ್‍ನಿಂದ ಸ್ರ್ಪಧಿಸುವುದಾಗಿ ಕೇಳಿಲ್ಲ.ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿಯೇ ಪ್ರಚಾರ ಮಾಡಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.ಆ ವೇಳೆ ಅವರಿಗೆ ಯಾರೆಲ್ಲಾ ಬೆಂಬಲ ನೀಡಿದ್ದರು ಎಂಬುದು ಈಗ ಅಪ್ರಸ್ತುತ ಎಂದರು.
ಕಾಂಗ್ರೆಸ್‍ನವರು ನನ್ನನ್ನು ಪಕ್ಷ ಸೇರುವಂತೆ ಆಹ್ವಾನಿಸಿದ್ದರು ಎಂದು ಸುಮಲತಾ ಹೇಳಿದ್ದಾರೆ. ನಮಗಿರುವ ಮಾಹಿತಿ ಪ್ರಕಾರ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಯಾರೂ ಸುಮಲತಾ ಅವರನ್ನು ಆಹ್ವಾನಿಸಿಲ್ಲ. ಒಂದು ವೇಳೆ ಅದು ನಿಜವೇ ಆಗಿದ್ದರೆ ಆಹ್ವಾನಿಸಿದವರ್ಯಾರು ಎಂದು ಸುಮಲತಾ ಅವರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜೆಡಿಎಸ್ ನಿಂದ 30 ಜನ ಬರ್ತಾರೆ:ಸ್ಪೋಟಕ ಹೇಳಿಕೆ ನೀಡಿದ ಸಚಿವ ಚಲುವರಾಯಸ್ವಾಮಿ
ಬಿಜೆಪಿ,ಜೆಡಿಎಸ್ ನಿಂದ 30 ಜನ ಕಾಂಗ್ರೆಸ್ ಗೆ ಬರ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಬರುವ ಕೆಲವು ಜನರ ಹೆಸರನ್ನು ಹೇಳಿದರೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗೆ ಶಾಕ್ ಆಗುತ್ತೆ, ಸುಮ್ಮನೆ ಇದನ್ನೆಲ್ಲಾ ಬಿಟ್ಟು ಚುನಾವಣೆ ಸಿದ್ಧತೆ ಮಾಡಿಕೊಂಡು ಬರಲಿ ಎಂದು ತಿರುಗೇಟು ನೀಡಿದರು.
ನಮ್ಮಲ್ಲಿ ಯಾವುದೇ ರೀತಿ ಆಪರೇಷನ್ ನಡೆಯುತ್ತಿಲ್ಲ, ಸಿಎಂ ಸಿದ್ದರಾಮಯ್ಯ , ಡಿಕೆಶಿ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಅವರಾಗಿಯೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು. ಬಿಜೆಪಿ, ಜೆಡಿಎಸ್ ನಿಂದ 30 ಜನ ಕಾಂಗ್ರೆಸ್ ಗೆ ಬರ್ತಾರೆ, ಅವರನ್ನು ಚುನಾವಣೆ ಮೊದಲು ಕರೆದುಕೊಳ್ಳಬೇಕಾ..? ಅಥವಾ ಚುನಾವಣೆ ನಂತರ ಕರೆದುಕೊಳ್ಳಬೇಕಾ ಎಂದು ಯೋಚಿಸುತ್ತಿದ್ದೇವೆ ಎಂದು ಟಾಂಗ್ ನೀಡಿದರು.