ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮನೆ ಮೇಲೆ ಉಕ್ರೇನ್ ದಾಳಿ ಮಾಡಲು ಬಳಸಲಾಗಿತ್ತು ಎನ್ನಲಾದ ಡ್ರೋನ್ ವಿಡಿಯೋವನ್ನು ರಷ್ಯಾ ಬಿಡುಗಡೆ ಮಾಡಿದೆ.
ನವ್ಗೊರೊಡ್ ಪ್ರದೇಶದಲ್ಲಿರುವ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿತ್ತು. ಆದರೆ, ಆ ಸಮಯದಲ್ಲಿ ಪುಟಿನ್ ಎಲ್ಲಿದ್ದರು ಎಂದು ಹೇಳಿರಲಿಲ್ಲ. ರಕ್ಷಣಾ ಸಚಿವಾಲಯವು ಹೊಡೆದುರುಳಿಸಿದ ಡ್ರೋನ್ನ ವೀಡಿಯೊವನ್ನು ಪ್ರಕಟಿಸಿತು. ಅದನ್ನು ದಾಳಿ ನಡೆಸಲು ಬಳಸಲಾಗಿದೆ ಎಂದು ರಷ್ಯಾ ಆರೋಪಿಸಿದೆ.
ರಾತ್ರಿ ವೇಳೆ ಚಿತ್ರೀಕರಿಸಲಾದ ಈ ವೀಡಿಯೊದಲ್ಲಿ, ಅರಣ್ಯ ಪ್ರದೇಶದಲ್ಲಿ ಹಿಮದಲ್ಲಿ ಬಿದ್ದಿರುವ ಹಾನಿಗೊಳಗಾದ ಡ್ರೋನ್ ಅನ್ನು ತೋರಿಸಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಫ್ಲೋರಿಡಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಆದರೆ, ರಷ್ಯಾ ಆರೋಪ ಸುಳ್ಳು ಎಂದು ಉಕ್ರೇನ್ ತಳ್ಳಿಹಾಕಿದೆ. ಶಾಂತಿ ಒಪ್ಪಂದ ಮುರಿಯುವ ಉದ್ದೇಶದಿಂದ ಹೆಣೆದಿರುವ ಕಟ್ಟುಕಥೆ ಎಂದು ರಷ್ಯಾ ವಿರುದ್ಧ ಉಕ್ರೇನ್ ಹರಿಹಾಯ್ದಿದೆ. ಇದು ಭಯೋತ್ಪಾದಕ ದಾಳಿ. ಪುಟಿನ್ ವಿರುದ್ಧದ ವೈಯಕ್ತಿಕ ದಾಳಿ ಎಂದು ರಷ್ಯಾ ಕರೆದಿದೆ.
ಉಕ್ರೇನ್ನ ಯುದ್ಧ ಮಾತುಕತೆಯಲ್ಲಿ ತನ್ನ ನಿಲುವನ್ನು ಕಠಿಣಗೊಳಿಸುವುದಾಗಿ ಪ್ರತಿಜ್ಞೆ ಮಾಡಿದೆ. ಡಿ.28 ರಂದು ರಾತ್ರಿ 7ರ ಸುಮಾರಿಗೆ ದಾಳಿ ನಡೆಸಿದೆ. ಆದರೆ, ಪುಟಿನ್ಗೆ ಯಾವುದೇ ತೊಂದರೆಯಾಗಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.















