ಮೈಸೂರು(Mysuru): ಕೆ.ಎಂ.ಪಿ.ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪುಟ್ಟಣ್ಣ ಕಣಗಾಲ್ ಅಭಿಮಾನಿ ಬಳಗ ವತಿಯಿಂದ ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಎಸ್.ಆರ್ ಪುಟ್ಟಣ್ಣ ಕಣಗಾಲ್ ಅವರ 89ನೇ ಜನ್ಮದಿನೋತ್ಸವದ ಅಂಗವಾಗಿ ಚಿತ್ರ ಬ್ರಹ್ಮನ ನೆನಪು ಕಾರ್ಯಕ್ರಮವನ್ನು ತಗಡೂರು ರಾಯರ ರಾಮಚಂದ್ರ ರಾವ್ ಉದ್ಯಾನವನದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಪೌರಾಣಿಕ ಮತ್ತು ಧಾರ್ಮಿಕ ಕತೆಗಳ ಆಧಾರಿತ ಚಿತ್ರಗಳನ್ನು ನೋಡುತ್ತಿದ್ದ ಪ್ರೇಕ್ಷಕರನ್ನು ಸಾಮಾಜಿಕ ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ಟಿಕೆಟ್ ಪಡೆಯಲು ನಿಲ್ಲುವಂತೆ ಮಾಡಿದವರೇ ಪುಟ್ಟಣ್ಣ ಕಣಗಾಲ್ ಅವರು. ಅಂದು ಬಿ.ಆರ್ ಪಂತಲು ಅವರ ಬಳಿ ಮೆಕ್ಯಾನಿಕ್ ಕಮ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿ ನಂತರ ಡೈಲಾಗ್ ಡೆಲಿವೆರಿ ಸಹನಿರ್ದೇಶಕನಾಗಿ ಮುಂದುವರೆದು ಇಡೀ ದೇಶವೇ ಚಪ್ಪಾಳೆ ಹೊಡೆಯುವ ಹಾಗೇ ಮಾಡಿ ಅತ್ಯುತ್ತಮ ಚಿತ್ರನಿರ್ದೇಶಕರಾಗಿ ಬೆಳೆದು ನಿಂತರು ಎಂದು ಹೇಳಿದರು.
ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮತ್ತು ಪುಟ್ಟಣ್ಣ ಕಣಗಾಲ್ ಎಂದರೆ ಡಾ. ರಾಜಕುಮರ್ ಅವರಿಗೆ ಎಲ್ಲಿಲ್ಲದ ಪ್ರೀತಿ ಗುರುಗಳ ಸ್ಥಾನದಲ್ಲಿ ಭಕ್ತಿಯಿಂದ ಕಾಣುತ್ತಿದ್ದರು, ಪುಟ್ಟಣ್ಣ ನವರ ಗರಡಿಯಲ್ಲಿ ಬೆಳೆದ ಅನೇಕರು ಕಿಂಗ್ ಆಗಿ ಚಿತ್ರರಂಗದಲ್ಲಿ ಮುನ್ನಡೆದರು. ಆದರೆ ಕಿಂಗ್ ಮೇಕರ್ ಆದ ಪುಟ್ಟರನ್ನು ಇಂದಿಗೆ ಮರೆತಿದ್ದಾರೆ, ಕೇವಲ ಮೈಕ್ ನಲ್ಲಿ ಪುಟ್ಟಣ್ಣ ಬೆಳೆಸಿದರು ಎನ್ನುತ್ತಾರೆ ಆದರೆ ಅವರ ಹೆಸರನ್ನು ಉಳಿಸಿ ಬೆಳಸಿ ಯುವನಿರ್ದೇಶಕರಿಗೆ ಮಾದರಿಯನ್ನಾಗಿಸಲು ಎಲ್ಲೂ ಮುಂದಾಗದಿರುವುದು ಬೇಸರದ ಸಂಗತಿ ಎಂದರು.
ನಂತರ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ರವರು ಮಾತನಾಡಿ, ಕಲಾವಿದರ ತವರೂರು ಮೈಸೂರು. ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದ ಕಾರಣ ಇಂದಿಗೆ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಅತ್ಯುತ್ತಮ ನಟರಾಗಿ ಹೊಮ್ಮಿದರು. ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬ ಪ್ರಧಾನವಾಗಿದ್ದ್ದವು. ಚಾಮಯ್ಯ ಮೇಷ್ಟ್ರು ಅಶ್ವಥ್ ರವರ ಪಾತ್ರ ಇವತ್ತಿಗೂ ಸಂಸ್ಕಾರದ ಸಂದೇಶ ತೋರಿಸುತ್ತದೆ ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ನಿರ್ಲೇ ಶ್ರೀನಿವಾಸ್ ಗೌಡ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್ , ನಗರಪಾಲಿಕ ಸದಸ್ಯರಾದ ಮ ವಿ ರಾಮಪ್ರಸಾದ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಮಿರ್ಲೆ ಪನೀಶ್, ಎಸ್ ಎನ್ ರಾಜೇಶ್, ಚಾಮುಂಡೇಶ್ವರಿ ಯುವ ಬಳಗದ ಅಧ್ಯಕ್ಷರಾದ ರಾಕೇಶ್, ಯೋಗೇಶ್, ಸುಚೇಂದ್ರ, ಅಪೂರ್ವ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.