ಮನೆ ರಾಜ್ಯ ಎಲ್ಲ ಕೆಎಸ್ ​ಆರ್ ​ಟಿಸಿ ಬಸ್​ ಗಳಿಗೂ ಕ್ಯುಆರ್ ಕೋಡ್ ಟಿಕೆಟ್ ವಿಸ್ತರಣೆ

ಎಲ್ಲ ಕೆಎಸ್ ​ಆರ್ ​ಟಿಸಿ ಬಸ್​ ಗಳಿಗೂ ಕ್ಯುಆರ್ ಕೋಡ್ ಟಿಕೆಟ್ ವಿಸ್ತರಣೆ

0

ಬೆಂಗಳೂರು: ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್​ಆರ್​​ಟಿಸಿ ಬಸ್​ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ ಆ್ಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕೆಎಸ್​ಆರ್​​ಟಿಸಿ ಮೂಲಗಳು ತಿಳಿಸಿವೆ.

Join Our Whatsapp Group

ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನವೆಂಬರ್ 6 ರಂದು ಕೆಎಸ್​ಆರ್​​ಟಿಸಿ ಬಸ್​​ಗಳಲ್ಲಿ ಆರಂಭಿಸಲಾಗಿತ್ತು. ಸದ್ಯ ನಿಗಮದ ಎಲ್ಲಾ 8,941 ಬಸ್‌ಗಳಿಗೆ ವಿಸ್ತರಿಸಲಾಗಿದೆ.

ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಆರಂಭದಲ್ಲೇ ಗಣನೀಯ ಯಶಸ್ಸನ್ನು ಸಾಧಿಸಿದೆ. ಸಂಸ್ಥೆಯ ದೈನಂದಿನ ಆದಾಯದ 7 ಕೋಟಿ ರೂ. (ಶಕ್ತಿ ಯೋಜನೆ ಮತ್ತು ವಿದ್ಯಾರ್ಥಿ ಪಾಸ್ ಫಲಾನುಭವಿಗಳನ್ನು ಹೊರತುಪಡಿಸಿ) ಪೈಕಿ 30-40 ಲಕ್ಷ ರೂಪಾಯಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಮೂಲಕವೇ ಪಾವತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಎನಿವೇರ್ ಎನಿಟೈಮ್ ಅಡ್ವಾನ್ಸ್ಡ್ ರಿಸರ್ವೇಶನ್ ಸಿಸ್ಟಮ್ (ಅವತಾರ್) ಮೂಲಕ 28,000 ಬುಕಿಂಗ್‌ಗಳಿಂದ ಕೆಎಸ್‌ಆರ್‌ಟಿಸಿ ಇನ್ನೂ 1.5 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ.

2024-25 ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ತನ್ನ ದೈನಂದಿನ ಆದಾಯದ ಶೇ 60-70 ರಷ್ಟನ್ನು ಡಿಜಿಟಲ್ ಮತ್ತು ಕ್ಯುಆರ್ ಪಾವತಿ ವಿಧಾನಗಳ ಮೂಲಕ ಪಡೆಯುವ ಗುರಿಯನ್ನು ಕೆಎಸ್​ಆರ್​ಟಿಸಿ ಹೊಂದಿದೆ.

ಯುಪಿಐ ಪಾವತಿ ಸುಲಭಗೊಳಿಸಲು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ನಿಯೋಜನೆಯೊಂದಿಗೆ ಪ್ರಾಯೋಗಿಕ ಆಧಾರದ ಮೇಲೆ ಕ್ಯುಆರ್ ಪಾವತಿ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ನವೆಂಬರ್ 11 ರ ಹೊತ್ತಿಗೆ, ಎಲ್ಲಾ 83 ಡಿಪೋಗಳು ತಲಾ ಐದು ಯಂತ್ರಗಳನ್ನು ಪಡೆದಿವೆ ಮತ್ತು ನವೆಂಬರ್ 18 ರ ಹೊತ್ತಿಗೆ, ಪ್ರತಿಯೊಂದು ಬಸ್‌ಗಳು ಅವುಗಳನ್ನು ಅಳವಡಿಸಿಕೊಂಡಿವೆ.

ಕ್ಯುಆರ್ ಕೋಡ್ ಆಧಾರಿತ ಟಿಕೆಟ್ ಪಾವತಿ ವ್ಯವಸ್ಥೆಯು ಎಲ್ಲಾ ಕೆಎಸ್ಆರ್​ಟಿಸಿ ಬಸ್​​ಗಳಲ್ಲಿ ಲಭ್ಯವಿದೆ. ಸುಮಾರು ಒಂದು ವರ್ಷದಲ್ಲಿ, ನಮ್ಮ ದೈನಂದಿನ ಆದಾಯದ ಪ್ರಮುಖ ಭಾಗವು ಡಿಜಿಟಲ್ ಮತ್ತು ಕ್ಯುಆರ್ ಪಾವತಿಗಳಿಂದ ಬರುತ್ತದೆ ಎಂಬ ಭರವಸೆ ಹೊಂದಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಪ್ರಕಾರ, ಕ್ಯುಆರ್​​ ಕೋಡ್ ಪಾವತಿ ವ್ಯವಸ್ಥೆ ಅಳವಡಿಸಿದ ಕೆಲವೇ ಸಾರಿಗೆ ನಿಗಮಗಳಲ್ಲಿ ಕರ್ನಾಟಕದ್ದು ಒಂದಾಗಿದೆ. ಡೈನಾಮಿಕ್ ಕ್ಯುಆರ್​​ ಆಧಾರಿತ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಕರ್ನಾಟಕದಲ್ಲಿಯೇ ಮೊದಲು. ಪಾವತಿಗಳಿಗಾಗಿ ಇದು ಯಾವುದೇ ಮಧ್ಯವರ್ತಿ ಶುಲ್ಕವನ್ನು ವಿಧಿಸುವುದಿಲ್ಲ.