ಯಳಂದೂರು: ಸಾಮಾಜಿಕ ಪಿಡುಗಾಗಿರುವ ಮದ್ಯಪಾನವನ್ನು ತಡೆಯುವುದು ಸವಾಲಿನ ಕೆಲಸವಾಗಿದೆ. ಯುವ ಸಮೂಹ ಕುಡಿತದ ದಾಸ್ಯಕ್ಕೆ ಒಳಗಾಗಿ ತಮ್ಮ ಜೀವನನ್ನೇ ಹಾಳು ಮಾಡಿಕೊಳ್ಳುತ್ತಿವೆ. ಈ ನಡುವೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮದ್ಯ ವರ್ಜನ ಶಿಬಿರವನ್ನು ನಡೆಸಿ, ಈ ಚಟವನ್ನು ಬಿಡಿಸುವ ಸಾಮಾಜಿಕ ಜವಾಬ್ದಾರಿ ಕೆಲಸ ನಿರ್ವಹಿಸುತ್ತಿದೆ. ಮದ್ಯ ತ್ಯಜಿಸಿದ ಎಲ್ಲರೂ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.
ಅವರು ಶುಕ್ರವಾರ ತಾಲೂಕಿನ ಗಂಗವಾಡಿ ಗ್ರಾಮದ ಶ್ರೀ ವೀರಭದ್ರೇಶ್ವರ ಜನಪದ ರಂಗ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ೮ ದಿನಗಳಿಂದ ನಡೆಯುತ್ತಿರುವ ೧೯೧೨ ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಮದ್ಯವರ್ಜನ ಶಿಬಿರಗಳ ಮೂಲಕ ದಾಖಲೆ ಮೊತ್ತದ ಜನರನ್ನು ಕುಡಿತದ ದಾಸ್ಯದಿಂದ ಬಿಡುಗಡೆ ಮಾಡಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲೀಕರಣ ಸಾಧಿಸಲು ಸಾಧ್ಯವಾಗಿದೆ. ಧಾರ್ಮಿಕ ಕ್ಷೇತ್ರಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳಲು ಶಕ್ತಿ ಯೋಜನೆ ಕಾರಣವಾಗಿದೆ. ಸರ್ಕಾರ ಎಲ್ಲಾ ಸವಲತ್ತುಗಳನ್ನು ಕೊಟ್ಟರೂ ಸಹ ಯುವ ಸಮೂಹ ಅದರಲ್ಲೂ ಪುರುಷರು ಹೆಚ್ಚಿನ ಕುಡಿತದ ಚಟಕ್ಕೆ ಬಿದ್ದು ಸಂಸಾರ ಹಾಳಾಗುತ್ತಿವೆ. ಇದರಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಮದ್ಯ ವರ್ಜನ ಶಿಬಿರ ಆರಂಭವಾಯಿತು. ಇಂದು ಇಂತಹ ಸಾವಿರಾರು ಕಾರ್ಯಕ್ರಮಗಳನ್ನು ಸಂಸ್ಥೆ ಮಾಡಿದ್ದು ಲಕ್ಷಾಂತರ ಮಂದಿ ಕುಡಿತವನ್ನು ಬಿಟ್ಟಿದ್ದಾರೆ. ಅನೇಕರು ೧೫, ೧೮ ವರ್ಷಗಳಿಂದಲೂ ಈ ಶಿಬಿರದ ನೆರವಿಂದ ವ್ಯಸನಮುಕ್ತರಾಗಿದ್ದಾರೆ. ಈ ಶಿಬಿರಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಸ್ಥೆ ಕೆಲಸ ಮಾಡುತ್ತಿದೆ. ಆದರೂ ಕೂಡ ಈಚೆಗೆ ಕೆಲವರು ಸಂಸ್ಥೆ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಸೇರಿ ಉತ್ತರ ನೀಡುವ ಕಾಲ ಸನ್ನಿಹಿತವಾಗಬೇಕು ಎಂದರು.
ಕಾರಾಪುರ ವಿರಕ್ತ ಮಠದ ಬಸವರಾಜು ಸ್ವಾಮಿ ಒಡೆಯರ್ ಮಾತನಾಡಿ, ಇಂದು ಜಗತ್ತಿನಲ್ಲಿ ಎರಡು ಜಾತಿಗಳಿದ್ದು ಒಂದು ಕುಡುಕರು ಹಾಗೂ ಇನ್ನೊಂದು ಕುಡಿಯದರಾಗಿದ್ದಾರೆ. ಈ ಗುಂಪಿನಲ್ಲಿ ಕುಡಿತದ ಚಟಕ್ಕೆ ಬಿದ್ದವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳಾಗಿದ್ದು ಇವರು ಎಲ್ಲರಿಂದಲೂ ತೆಗಳಿಸಿಕೊಳ್ಳುವರಾಗಿದ್ದಾರೆ. ಮೃಗಗಳಿಗಿಂತಲೂ ಕೀಳಾಗಿ ವರ್ತನೆ ಮಾಡಲು ಪ್ರೇರೇಪಿಸುವ ಇಂತಹ ಮದ್ಯ ನಮಗೆ ಬೇಡವಾಗಿದ್ದು, ಸಂಸಾರ, ಸಮಾಜದ ಸ್ವಾಸ್ಥ್ಯದ ನೆಮ್ಮದಿಗೆ ಇದರಿಂದ ದೂರವಿರುವುದೇ ಮದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿ.ಸಿ. ಬಾಬು, ಮುಖ್ಯ ಅತಿಥಿಯಾಗಿದ್ದ ಗ್ಯಾರಂಟಿಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಜಯರಾಮ್ ನೆಲ್ಲಿತ್ತಾಯ, ಎ.ಎಸ್. ರವಿಶಂಕರ್, ಪಿಎಸ್‌ಐ ಆಕಾಶ್ ಮಾತನಾಡಿದರು. ಯೋಜನಾಧಿಕಾರಿ ಆನಂದಗೌಡ, ಪ್ರಕಾಶ್‌ಮೂರ್ತಿ, ವಿದ್ಯಾಧರ್, ರಂಜಿತಾ, ಮಾಲಾ ಸೇರಿದಂತೆ ಅನೇಕರು ಇದ್ದರು.