ಮನೆ ರಾಜಕೀಯ ವಿಧಾನಸಭೆ ಪ್ರತಿಪಕ್ಷ ನಾಯಕನಾಗಲು ಆರ್ ಅಶೋಕ್ ನಾಲಾಯಕ್: ಪ್ರಮೋದ್ ಮುತಾಲಿಕ್

ವಿಧಾನಸಭೆ ಪ್ರತಿಪಕ್ಷ ನಾಯಕನಾಗಲು ಆರ್ ಅಶೋಕ್ ನಾಲಾಯಕ್: ಪ್ರಮೋದ್ ಮುತಾಲಿಕ್

0

ಉಡುಪಿ: ವಿಧಾನಸಭೆ ಪ್ರತಿಪಕ್ಷ ನಾಯಕನಾಗಲು ಆರ್ ಅಶೋಕ್ ನಾಲಾಯಕ್ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶುಕ್ರವಾರ ವಾಗ್ದಾಳಿ ನಡೆಸಿದರು.

ಮಂಗಳೂರು ಪಬ್ ದಾಳಿಕೊರರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದ ಬಗ್ಗೆ ಅಶೋಕ್ ಹೇಳಿಕೆ ಕುರಿತ ಹಿಂದೂ ಸಂಘಟನೆಗಳ ಮುನಿಸು ಇನ್ನೂ ತಣಿದಿಲ್ಲ ಎಂಬುದು ಸ್ಪಷ್ಟವಾಗಿದೆ. ಪಬ್ ದಾಳಿ ಮಾಡಿದ್ದ ಬಜರಂಗದಳ ಕಾರ್ಯಕರ್ತರ ಮೇಲೆ ಗುಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಅಶೋಕ್ ಹೇಳಿದ್ದರು. ಆದರೆ, ಮಂಗಳೂರು ಪಬ್ ದಾಳಿ ಮಾಡಿದ್ದು, ಬಜರಂಗದಳ ಅಲ್ಲ, ಶ್ರೀರಾಮ ಸೇನೆ ಎಂದು ಸಾಮಾಜಿ ಜಾಲತಾಣಗಳಲ್ಲಿ ಶ್ರೀರಾಮ ಸೇನೆ ಸಂದೇಶ ಪ್ರಕಟಿಸಿದೆ.

ಮಂಗಳೂರು ಪಬ್ ದಾಳಿ ನಡೆಸಿದ್ದು ಶ್ರೀರಾಮ ಸೇನೆ ಕಾರ್ಯಕರ್ತರು. ಆ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಯಾವುದೇ ಗುಂಡಾ ಕಾಯ್ದೆ ಹಾಕಿರಲಿಲ್ಲ. ಆದರೆ, ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಥಮ ಬಾರಿ ಪ್ರಕರಣ ದಾಖಲಿಸಿದವರೇ ಆರ್. ಅಶೋಕ್. ಕಾಂಗ್ರೆಸ್​ ನವರು ಯಾವತ್ತೂ ಹಿಂದೂ ಕಾರ್ಯಕರ್ತರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಈ ವಿಚಾರವನ್ನು ನಾನೇ ಆರ್ ಅಶೋಕ್ ​​ಗೆ ಹೇಳಿದ್ದೆ. ಅಶೋಕ್ ನಂತರ ಕಾಂಗ್ರೆಸ್​​​ನವರು ಕೂಡ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಮುತಾಲಿಕ್ ಹೇಳಿದರು.

ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಹಿಂದೂ ಕಾರ್ಯಕರ್ತರಿಗೆ ಆರ್ ಅಶೋಕ್ ಕೊಟ್ಟ ಕೊಡುಗೆ. ಅವರು ಗೃಹ ಸಚಿವರಾಗಿದ್ದಾಗ ಪಿಎಫ್​ಐ ಗಲಾಟೆ ಮಾಡಿತ್ತು. ಆದರೆ ಆ ಬಗ್ಗೆ ಗೃಹ ಸಚಿವರಾಗಿ ಅಶೋಕ್ ಒಂದೇ ಒಂದು ಪತ್ರ ಕೇಂದ್ರಕ್ಕೆ ಬರೆದಿರಲಿಲ್ಲ ಎಂದು ಮುತಾಲಿಕ್ ಕಿಡಿ ಕಾರಿದರು.

ಚಾಮರಾಜಪೇಟೆಯಲ್ಲಿ ಗಣಪತಿ ಇಡದೇ ಇರಲು ಕಾರಣವೇ ಆರ್ ಅಶೋಕ್. ಅವರು ಮತ್ತು ಜಮೀರ್ ಅಹ್ಮದ್ ಜೋಡಿಗಳು. ಸರಿಯಾಗಿ ವಾದಮಂಡನೆ ಮಾಡದೆ ಸಹಕಾರ ಕೊಡದಿರುವುದರಿಂದ ಹೀಗಾಗಿದೆ. ಆರ್ ಅಶೋಕ್ ತಮ್ಮ ಬಾಯಿಯಿಂದಲೇ ಬಣ್ಣ ಬಯಲು ಮಾಡಿಕೊಂಡಿದ್ದಾರೆ. ವಿಪಕ್ಷ ನಾಯಕನಾಗಲು ಆರ್ ಅಶೋಕ್ ಅಯೋಗ್ಯ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರು ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕ ಹುದ್ದೆಯಿಂದ ತೆಗೆದು ಹಾಕಬೇಕು. ಮಂಡ್ಯದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲದಿರಲು ಆರ್ ಅಶೋಕ್ ಕಾರಣ. ಕರ್ನಾಟಕದ ಯಾವ ಜಿಲ್ಲೆಯಲ್ಲೂ ಆರ್ ಅಶೋಕ್ ಹಿಂದೂಗಳಿಗೆ ಬೆಂಬಲ ಕೊಟ್ಟಿಲ್ಲ. ಈ ವಿಚಾರವನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ. ಅವರನ್ನು ಅಮಾನತು ಮಾಡಲು ಪಕ್ಷಕ್ಕೆ ಒತ್ತಾಯ ಮಾಡುತ್ತೇನೆ ಎಂದು ಮುತಾಲಿಕ್ ಹೇಳಿದ್ದಾರೆ.