ಮೈಸೂರು: ಆರ್.ಧ್ರುವನಾರಾಯಣ ಪ್ರಜ್ಞಾವಂತ, ಸಂವೇದನಾಶೀಲರಾಗಿ ಸಾಮಾಜಿಕ ನ್ಯಾಯದ ಪರವಾದ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಎಂದು ಚಿಂತಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ಇಲ್ಲಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಎಂ.ಕೆ.ಸೋಮಶೇಖರ್ ಅಭಿಮಾನಿ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಹೊಸತಲೆಮಾರಿನ ರಾಜಕಾರಣದಲ್ಲಿ ಮಾದರಿ ರಾಜಕಾರಣಿಯಾಗಿದ್ದರು ಎಂದು ನೆನೆದರು.
ಸಂಸದರಾಗಿದ್ದಾಗ ಅನುದಾನದ ಸದ್ಬಳಕೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದರು. ಯಾರಿಗೂ ಮೋಸ, ವಂಚನೆ, ಅನ್ಯಾಯ ಮಾಡಿದವರಲ್ಲ. ತಾಳ್ಮೆ, ಸಂವೇದನಾ ಶೀಲತೆಯಿಂದ ಸಜ್ಜನಿಕೆ, ಸರಳತೆಯ ಮೂಲಕ ಅಪರೂಪದ ರಾಜಕಾರಣಿಯಾಗಿಯೇ ಉಳಿದರು ಎಂದರು.
ರಾಜಕಾರಣಿಗಳು ಸಮಾಜದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತಮ್ಮ ವೈಯಕ್ತಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ನನಗೆ ಅಣ್ಣನಂತಿದ್ದರು. ಹೆಚ್ಚಿನ ಒಡನಾಟವನ್ನು ಹೊಂದಿದ್ದರು. ನೈತಿಕತೆಯ ರಾಜಕಾರಣ ಮಾಡಿದವರು. ಜಾತಿ ನೋಡಿದವರಲ್ಲ. ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದರು ಎಂದು ಒಡನಾಟ ನೆನೆದು ಕಣ್ಣೀರಿಟ್ಟರು.
ಮುಖಂಡ ಪುರುಷೋತ್ತಮ್, ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್, ಶ್ರೀಧರ್, ಮಾಧ್ಯಮ ವಕ್ತಾರ ಶ್ರೀನಿವಾಸ್, ಮುಖಂಡರಾದ ಜೋಗಿ ಮಹೇಶ್, ಭಾಸ್ಕರ್ ಎಲ್. ಗೌಡ, ಗೋಪಿನಾಥ್, ನಾರಾಯಣ, ಈಶ್ವರ್ ಚಕ್ಕಡಿ, ಎಂ.ಸಿ.ಚಿಕ್ಕಣ್ಣ, ಎನ್.ಮಾರ, ಶಿವಮಲ್ಲು, ರವಿಶಂಕರ್, ಶ್ರೀನಾಥ್ ಬಾಬು, ಗುಣಶೇಖರ್ ಇದ್ದರು.