ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಲ್ ರೌಂಡರ್ ರಚಿನ್ ರವೀಂದ್ರ ಶತಕ ಸಿಡಿಸಿ ಮಿಂಚಿದ್ದಾರೆ. ಈ ವಿಶ್ವಕಪ್ ನಲ್ಲಿ ಅವರು ಬಾರಿಸಿದ ಮೂರನೇ ಶತಕ ಇದಾಗಿದೆ.
94 ಎಸೆತ ಎದುರಿಸಿದ ರಚಿನ್ ರವೀಂದ್ರ ಅವರು 108 ರನ್ ಗಳಿಸಿದರು. ಈ ಇನ್ನಿಂಗ್ಸ್ ನಲ್ಲಿ ಅವರು ಒಂದು ಸಿಕ್ಸರ್ ಮತ್ತು 15 ಬೌಂಡರಿ ಬಾರಿಸಿದರು. ಅಲ್ಲದೆ ಎರಡನೇ ವಿಕೆಟ್ ಗೆ ನಾಯಕ ವಿಲಿಯಮ್ಸನ್ ಜತೆ ಸೇರಿ 180 ರನ್ ಜೊತೆಯಾಟವಾಡಿದರು.
ಇದೇ ವೇಳೆ ರಚಿನ್ ರವೀಂದ್ರ ಅವರು ಹಲವು ದಾಖಲೆಗಳನ್ನು ಬರೆದರು. 25 ವರ್ಷ ತುಂಬುವುದರೊಳಗೆ ವಿಶ್ವಕಪ್ ನಲ್ಲಿ ಮೂರು ಶತಕ ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ ಸಚಿನ್ ತೆಂಡೂಲ್ಕರ್ ಎರಡು ಶತಕ ಬಾರಿಸಿದ ದಾಖಲೆ ಹೊಂದಿದ್ದರು. ಅಂದಹಾಗೆ ರಚಿನ್ ಗೆ ಈಗ 23ರ ಹರೆಯ.
ನ್ಯೂಜಿಲ್ಯಾಂಡ್ ಪರ ಒಂದೇ ವಿಶ್ವಕಪ್ ನಲ್ಲಿ ಮೂರು ಶತಕ ಬಾರಿಸಿದ ಮೊದಲ ಆಟಗಾರನಾಗಿ ರಚಿನ್ ಮೂಡಿಬಂದರು. ಈ ಹಿಂದೆ ಆರು ಮಂದಿ ಕಿವೀಸ್ ಬ್ಯಾಟರ್ ಗಳು ಒಂದು ವಿಶ್ವಕಪ್ ನಲ್ಲಿ ಎರಡು ಶತಕ ಗಳಿಸಿದ್ದರು.
25 ವರ್ಷದ ಒಳಗೆ ಒಂದೇ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲಿಯೂ ಸಚಿನ್ ಅವರನ್ನು ರಚಿನ್ ಸರಿಗಟ್ಟಿದ್ದಾರೆ. 1996ರ ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು 523 ರನ್ ಬಾರಿಸಿದ್ದರು. ಸದ್ಯ ರಚಿನ್ ರವೀಂದ್ರ ಕೂಡ 523 ರನ್ ಬಾರಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದರೂ ಸಚಿನ್ ದಾಖಲೆ ಪತನಗೊಳ್ಳಲಿದೆ.
ಇದೇ ವೇಳೆ ಚೊಚ್ಚಲ ವಿಶ್ವಕಪ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಪುಟದಲ್ಲಿಯೂ ರಚಿನ್ ಅವರು ಬಾಬರ್ ಅಜಂ ದಾಖಲೆ ಮುರಿದಿದ್ದಾರೆ. 2019ರಲ್ಲಿ ಬಾಬರ್ ಅಜಂ ಅವರು 474 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಸದ್ಯ ಎಂಟು ಪಂದ್ಯಗಳಿಂದ 523 ರನ್ ಗಳಿಸಿದ ರಚಿನ್ ಎರಡನೇ ಸ್ಥಾನಕ್ಕೇರಿದ್ದಾರೆ. ಸದ್ಯ ಈ ದಾಖಲೆ ಜಾನಿ ಬೆರಿಸ್ಟೋ ಹೆಸರಲ್ಲಿದೆ. ಅವರು 2019ರ ಆವೃತ್ತಿಯಲ್ಲಿ ಬೆರಿಸ್ಟೋ ಅವರು 11 ಇನ್ನಿಂಗ್ಸ್ ಗಳಲ್ಲಿ 532 ರನ್ ಗಳಿಸಿದ್ದರು.