ಬೆಂಗಳೂರು (Bengaluru)- ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯಪಾಲ ತಾವರ್‌ಚೆಂದ್ ಗೆಹ್ಲೋಟ್ ಅವರು ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಆ ಬಳಿಕ ರಘುನಾಥ್ ರಾವ್ ಮಲ್ಕಾಪುರೆ ಅವರು ವಿಧಾನಸೌಧದ ಕೊಠಡಿ ಸಂಖ್ಯೆ 117ರಲ್ಲಿ ಹಂಗಾಮಿ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದರು.
ವಿಧಾನ ಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಿಯಮಾವಳಿಗಳ ಪ್ರಕಾರ ಸಭಾಪತಿ ತಮ್ಮ ರಾಜೀನಾಮೆಯನ್ನು ಉಪಸಭಾಪತಿಗೆ ನೀಡಬೇಕಾಗುತ್ತದೆ. ಸದ್ಯ ಉಪಸಭಾಪತಿ ಸ್ಥಾನವೂ ಖಾಲಿ ಇದೆ. ಈ ಕಾರಣದಿಂದ ಹೊರಟ್ಟಿ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಆವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಈಗ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಿರುವುದರಿಂದ ಹೊರಟ್ಟಿ ಅವರ ರಾಜೀನಾಮೆ ಅಂಗೀಕರಿಸಲು ಸುಗಮವಾಗುತ್ತದೆ.
ರಘುನಾಥ್ ರಾವ್ ಮಲ್ಕಾಪುರೆ ಅವರು ಅಧಿಕಾರ ವಹಿಸಿಕೊಂಡ ಬಳಿಕ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.