ತುಮಕೂರು: ಮಠದಲ್ಲಿ ಯಾವುದೇ ಜಾತಿ, ಧರ್ಮವನ್ನು ನೋಡದೆ ಭ್ರಾತೃತ್ವ ಪ್ರಚಾರ ಮಾಡುವ ಕೆಲಸ ನಡೆದಿದೆ. ಪ್ರಸ್ತುತ ದ್ವೇಷ ಬಿತ್ತುತ್ತಿರುವ ಸಮಯದಲ್ಲಿ ಸಿದ್ಧಗಂಗಾ ಮಠದ ಜಾತ್ಯಾತೀತ ಸಂದೇಶ ನಮಗೆಲ್ಲ ಮಾದರಿಯಾಗಿದೆ. ಅದಕ್ಕಾಗಿ ಸ್ವಾಮೀಜಿಗೆ ನಮನ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿದ ಅವರು, ಶ್ರೀಗಳ ಗದ್ದುಗೆ ದರ್ಶನ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಸವಣ್ಣನ ಸಂದೇಶವನ್ನು ಜಗತ್ತಿಗೆ ತಿಳಿಸುವ ಪ್ರಯತ್ನದಲ್ಲಿ ಮಠ, ಸ್ವಾಮೀಜಿ ಸಾಗಿದ್ದಾರೆ. ಹಿಂದೆ ಮಠಕ್ಕೆ ಬಂದಿದ್ದಾಗ ಶಿವಕುಮಾರ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೆ. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ತ್ರಿವಿಧ ದಾಸೋಹದ ಮೂಲಕ ನಾಡಿಗೆ ಮಾದರಿ ಸಂದೇಶ ನೀಡಿದ್ದಾರೆ. ಅವರ ದಾರಿಯಲ್ಲಿ ನಾವೆಲ್ಲ ಸಾಗಬೇಕಿದೆ. ಆದರೆ ಈಗ ಅವರಿಲ್ಲ ಎಂಬುದು ದುಃಖದ ಸಂಗತಿ’ ಎಂದು ತಿಳಿಸಿದರು.
ದೇಶದಲ್ಲಿ ದ್ವೇಷ ಹರಡುವುದನ್ನು ನಿಲ್ಲಿಸಬೇಕು, ಭ್ರಾತೃತ್ವ ಭಾವನೆ ಹರಡಬೇಕು. ಬಸವಣ್ಣನವರ ಜಾತ್ಯತೀತ ಮನೋಭಾವ, ಅವರ ವಚನಗಳ ಆಶಯ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದು ಹೇಳಿದರು.
ಸಿದ್ಧಗಂಗಾ ಮಠ ಹಾಗೂ ನಮ್ಮ ಕುಟುಂಬಕ್ಕೂ ಹಿಂದಿನಿಂದಲೂ ಅವಿನಾಭಾವ ಹಾಗೂ ಗೌರವಯುತ ಸಂಬಂಧವಿದೆ. ನಮ್ಮ ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ಅವರು ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದಿದ್ದರು. ಈಗ ನಾನು ಮಠಕ್ಕೆ ಬಂದಿರುವುದು ವೈಯಕ್ತಿಕವಾಗಿ ಬಹಳ ಸಂತೋಷ ಕೊಟ್ಟಿದೆ. ಸಿದ್ಧಗಂಗಾ ಮಠ ಶಿಕ್ಷಣ, ದಾಸೋಹಕ್ಕೆ ಪ್ರಸಿದ್ಧಿ, ಬಸವಣ್ಣನವರ ಜಾತ್ಯತೀತ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ. ಹಿಂದೆ ತಾವು ಮಠಕ್ಕೆ ಭೇಟಿ ನೀಡಿದ್ದಾಗ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೆ. ಈ ಬಾರಿ ಅವರಿಲ್ಲದಿರುವುದು ಬೇಸರದ ಸಂಗತಿ ಎಂದರು.
ಅವರು ಹಾಕಿ ಕೊಟ್ಟಿರುವ ಮಾರ್ಗ ನಮಗೆ ದಾರಿದೀಪ. ಭ್ರಾತೃತ್ವ, ಸೋದರತ್ವ, ಸಾಮರಸ್ಯವನ್ನು ಪ್ರಚಾರ ಮಾಡುವ ಕೆಲಸವನ್ನು ಸಿದ್ಧಗಂಗಾ ಮಠ ಮಾಡುತ್ತಿದೆ. ಇದಕ್ಕಾಗಿ ನಾವು ಸಿದ್ಧಗಂಗಾ ಮಠ ಹಾಗೂ ಶ್ರೀಗಳನ್ನು ಅಭಿನಂದಿಸುತ್ತೇವೆ ಎಂದರು.