ಮನೆ ರಾಜಕೀಯ ಮಾರ್ಚ್ 31ಕ್ಕೆ ರಾಹುಲ್ ಗಾಂಧಿ ರಾಜ್ಯ ಭೇಟಿ : ಡಿ ಕೆ ಶಿವಕುಮಾರ್

ಮಾರ್ಚ್ 31ಕ್ಕೆ ರಾಹುಲ್ ಗಾಂಧಿ ರಾಜ್ಯ ಭೇಟಿ : ಡಿ ಕೆ ಶಿವಕುಮಾರ್

0

ಬೆಂಗಳೂರು : ಮಾರ್ಚ್ 31ರಂದು ಕಾಂಗ್ರೆಸ್​​​ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಇದೇ ಮಾರ್ಚ್​​ 31ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ತುಮಕೂರು ಸಿದ್ಧಗಂಗಾ ಮಠದ ಮಠಾಧೀಶರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.

ಬಳಿಕ ಬಿಬಿಎಂಪಿ ವ್ಯಾಪ್ತಿಯ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಅಂದು ಶಾಸಕರು, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳ ಜೊತೆ ಜೂಮ್​ ಮೂಲಕ ಸಭೆ ನಡೆಸಲಿದ್ದಾರೆ. ಸದಸ್ಯತ್ವ ಅಭಿಯಾನಕ್ಕೆ ವೇಗ ಕೊಡುವ ಮೂಲಕ ಸಾಧನೆ ಮಾಡಿರುವ ಕಾರ್ಯಕರ್ತರನ್ನು ಭೇಟಿ ಮಾಡಿಸಿ ಮಾತನಾಡಿಸುವ ಪ್ರಯತ್ನ ಮಾಡುತ್ತೇವೆ ಎಂದು ವಿವರಿಸಿದರು.

ಅವಧಿ ಪೂರ್ವ ಚುನಾವಣೆ ವಿಚಾರ ಮಾತನಾಡಿ, ಯಾವಾಗಲಾದರೂ ಚುನಾವಣೆ ಮಾಡಲಿ. ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಿದ್ಧವಾಗಿದೆ. ನವೆಂಬರ್ 27ಕ್ಕೆ ಆದರೂ ಮಾಡಲಿ, ಏಪ್ರಿಲ್ ಅಥವಾ ಜೂನ್​​​ನಲ್ಲಿ ಆದರೂ ಮಾಡಲಿ, ಯಾವಾಗ ಮಾಡಿದರೂ ನಾವು ಚುನಾವಣೆಗೆ ಸಿದ್ಧ ಎಂದ ಅವರು, ಜಾತ್ರೆಗಳಲ್ಲಿ ಯಾವುದೇ ಧರ್ಮದ ವ್ಯಾಪಾರಿಗಳಿಗೆ ಅಡಚಣೆ ಮಾಡಬಾರದು ಎಂದು ವಿವರಿಸಿದರು.

ಟಿಪ್ಪುಗೆ ಮೈಸೂರು ಹುಲಿ‌ ಬಿರುದು ಗೊಂದಲ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಲಂಡನ್ ಗ್ರಂಥಾಲಯಕ್ಕೆ ಹೋಗಿ ನೋಡಲಿ, ಮೈಸೂರು ಹುಲಿ ಎಂಬ ‌ಬಿರುದು ನಾವು ಕೊಟ್ಟಿದ್ದಲ್ಲ. ಬ್ರಿಟಿಷರು ಬಿರುದು ಕೊಟ್ಟಿದ್ದಾರೆ. ಹೋಗಿ ಯಾಕೆ ಕೊಟ್ರಿ ಅಂತಾ ಬ್ರಿಟಿಷರನ್ನು ಕೇಳುತ್ತೇವೆ. ಟಿಪ್ಪು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರ ಇತಿಹಾಸ ತಿರುಚಲು ಯಾರಿಂದಲು ಸಾಧ್ಯವಿಲ್ಲ. ಹೊಸದಾಗಿ ಏನು ಸೇರಿಸಲು ಆಗಲ್ಲ. ಇತಿಹಾಸದಲ್ಲಿ ಇರುವುದನ್ನು ತೆಗೆಯಲು ಆಗಲ್ಲ ಎಂದರು.

ಹಿಂದುತ್ವ ಕಾಂಗ್ರೆಸ್​ಗೆ ಹೊಸದಲ್ಲ. ನಾವೆಲ್ಲ ಹಿಂದೂಗಳೆ, ರಾಹುಲ್ ಗಾಂಧಿ ಸಂಸತ್ತಿನಲ್ಲಿ, ಜೈಪುರ ಸಮಾವೇಶದಲ್ಲಿ ಇದನ್ನೇ ಹೇಳಿದ್ದು. ಆದರೆ, ಧರ್ಮ, ಜಾತಿಯ ಆಧಾರದ ಮೇಲೆ ಸಮಾಜವನ್ನು ಒಡೆಯುವುದು ಸರಿಯಲ್ಲ. ಇದನ್ನು ಜನ ನೋಡುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಸಲೀಂ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.