ಬೆಂಗಳೂರು(Bengaluru): ಕಾಂಗ್ರೆಸ್ ನಲ್ಲಿ ನನಗೆ ಅವಕಾಶ ನೀಡಿದವರು ರಾಹುಲ್ ಗಾಂಧಿ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ಹರಿಹಾಯ್ದಿದ್ದಾರೆ.
ನನ್ನ ಪರವಾಗಿ ನಿಂತುಕೊಂಡವರು ಕೂಡ ಅವರೇ, ನನಗೆ ಅವಕಾಶ ನೀಡಿರುವುದಾಗಿ ಹೇಳಿಕೊಳ್ಳುವ ಬೇರೆಯವರೆಲ್ಲ ಅವಕಾಶವಾದಿಗಳು. ಈ ಅವಕಾಶವಾದಿಗಳು ಬೆನ್ನಿಗೆ ಚೂರಿ ಹಾಕಿದ್ದಾರೆ, ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಟಿವಿಯಲ್ಲಿ ನೀವು ನೋಡುವುದೆಲ್ಲವೂ ಅವರ ವಂಚಕ ಮನಸ್ಸನ್ನು ಮರೆಮಾಚುವ ಪ್ರಹಸನವಾಗಿದೆ ಎಂದಿದ್ದಾರೆ.
ನನ್ನ ವಿರುದ್ಧ 8 ಕೋಟಿ ರೂ. ವಂಚನೆ ಆರೋಪ ಸುಳ್ಳು: ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಜವಾಬ್ದಾರಿ ಹುದ್ದೆಯನ್ನು ಬಿಟ್ಟ ಬಳಿಕ ನನ್ನ ವಿರುದ್ಧ 8 ಕೋಟಿ ರೂಪಾಯಿ ವಂಚಿಸಿದ ಆರೋಪಗಳು ಕೇಳಿಬಂದವು. ನನ್ನ ದಕ್ಷತೆ, ನಿಖರತೆ ಮತ್ತು ಪ್ರಾಮಾಣಿಕತೆಯನ್ನು ನಾಶಮಾಡಲು ಕೆಲವು ಸುದ್ದಿ ಚಾನೆಲ್ ಗಳಲ್ಲಿ ಈ ಬಗ್ಗೆ ಸುಳ್ಳು ಸುದ್ದಿ ಸೃಷ್ಟಿಸಲಾಯಿತು. ನಾನು ಎಲ್ಲಿಗೂ ಓಡಿಹೋಗಿಲ್ಲ. ನನ್ನ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದೆ. ನಾನು ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ 8 ಕೋಟಿ ರೂಪಾಯಿ ವಂಚಿಸಿಲ್ಲ, ನಾನು ಸುಮ್ಮನೆ ಕುಳಿತಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ ಸಿ ವೇಣುಗೋಪಾಲ್ ಅವರು ಈ ಬಗ್ಗೆ ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಬೇಕು. ಆಗ ಇನ್ನು ಮುಂದೆ ನನ್ನ ಬಗ್ಗೆ ಈ ರೀತಿಯ ನಿಂದನೆ, ಆರೋಪ, ಟ್ರೋಲ್ ಗಳು ನಿಲ್ಲಬಹುದು ಎಂದು ನಾನು ನಂಬುತ್ತೇನೆ ಎಂದು ರಮ್ಯಾ ಕೇಳಿಕೊಂಡಿದ್ದಾರೆ.