ಮೈಸೂರು : ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್ ಆದಿಯಿಂದಲೂ ಕುರ್ಚಿ ಕಾಳಗ ಜೋರಾಗಿಯೇ ನಡೆದಿದೆ. ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಮಾತು ನೆನಪಿಸುತ್ತಿದ್ದರೆ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಮಾತೇ ನನಗೆ ಶಾಸನ ಎನ್ನುತ್ತಿದ್ದಾರೆ. ಈ ಕಾಳಗದ ನಡುವೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಲೋಕಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ವರಿಷ್ಠ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸಲಿದ್ದಾರೆ. ವಯನಾಡಿಗೆ ತೆರಳಲು ಸಜ್ಜಾಗಿರುವ ರಾಹುಲ್ ಗಾಂಧಿ, ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಇಲ್ಲಿಂದ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇಂದು ಮಧ್ಯಾಹ್ನ 2:20ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಮಧ್ಯಾಹ್ನ 1:30ಕ್ಕೆ ಮೈಸೂರಿಗೆ ಆಗಮಿಸಲಿದ್ದು, ವಯನಾಡಿಗೆ ರಾಹುಲ್ ಗಾಂಧಿ ತೆರಳುವ ಮುಂಚೆಯೇ, ಮೂವರು ನಾಯಕರು ಲಂಚ್ ಮೀಟಿಂಗ್ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಕೈ ಪಾಳಯದ ವರಿಷ್ಠ ನಾಯಕ. ಅವರು ರಾಜ್ಯಕ್ಕೆ ಬಂದಾಗ ಸಿಎಂ ಡಿಸಿಎಂ ಹೋಗಿ ಸ್ವಾಗತಿಸುವುದು ಸರ್ವೇ ಸಾಮಾನ್ಯ. ಆದರೆ ಈಗ ರಾಹುಲ್ ಗಾಂಧಿ ಬರುತ್ತಿರುವುದು ಕುರ್ಚಿ ಕದನ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಸಮಯದಲ್ಲಿ. ಹೀಗಾಗಿಯೇ ರಾಹುಲ್ ಜೊತೆಗಿನ ಸಿಎಂ, ಡಿಸಿಎಂ ಲಂಚ್ ಮೀಟಿಂಗ್ ಸಹಜವಾಗಿ ಕುತೂಹಲ ಕೆರಳಿಸಿದೆ.
ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್, ಮಾತು ಮಾತಿಗೂ ವರ್ಡ್ ಪವರ್ ಇಸ್ ವರ್ಲ್ಡ್ ಪವರ್ ಅಂತಿದ್ದಾರೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ, ಅಧಿಕಾರ ಹಸ್ತಾಂತರ ವಿಚಾರವಾಗಲಿ, ಸಂಪುಟ ಪುನರ್ ರಚನೆಯ ವಿಚಾರವೇ ಬರಲಿ, ಹೈಕಮಾಂಡ್ ಹೇಳಿದಂತೆ ಎಲ್ಲವೂ ನಡೆಯಲಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ಇಂದು ರಾಹುಲ್ ಜೊತೆಗೆ ನಡೆಯುತ್ತಿರುವ ಲಂಚ್ ಮೀಟಿಂಗ್ ತೀವ್ರ ಕುತೂಹಲ ಕೆರಳಿಸಿದೆ.
ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಎಲ್ಲಾ ಠುಸ್ ಪಟಾಕಿ ಆದ ನಂತರ ಈಗ ಸಂಕ್ರಾಂತಿಯಲ್ಲಿ ಶುಭ ಮುಹೂರ್ತ ಅನ್ನೋ ಮಾತು ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕೇಳಿ ಬರುತ್ತಿದೆ. ಇದೇ ಸಮಯದಲ್ಲಿಯೇ ರಾಜ್ಯಕ್ಕೆ ಕಾಂಗ್ರೆಸ್ ನಾಯಕ ಆಗಮಿಸುತ್ತಿದ್ದು, ಸಿಎಂ, ಡಿಸಿಎಂ ಜೊತೆ ಲಂಚ್ ಮೀಟಿಂಗ್ ನಡೆಸಲಿದ್ದಾರೆ. ಲಂಚ್ ಮೀಟಿಂಗ್ ವೇಳೆಯೇ ರಾಹುಲ್ ಗಾಂಧಿ ಅಧಿಕಾರ ಹಸ್ತಾಂತರ ವಿಚಾರವಾಗಿ ಶುರುವಾಗಿರುವ ಹೈಡ್ರಾಮಾಗೆ ಕ್ಲೈಮ್ಯಾಕ್ಸ್ ಹೇಳಲಿದ್ದಾರಾ? ಇಲ್ಲವೇ ಕ್ಯಾಬಿನೆಟ್ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರಾ ಅನ್ನೊ ಕೌತುಕ ಈಗ ರಾಜ್ಯ ರಾಜಕೀಯದಲ್ಲಿ ಮನೆ ಮಾಡಿದೆ.
ಸಿಎಂ ಕುರ್ಚಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಾಯಕರು, ಅದರಲ್ಲೂ ರಾಹುಲ್ ಗಾಂಧಿ ಒಂದು ಅಂತರವನ್ನ ಕಾಯ್ದುಕೊಂಡೇ ಬಂದಿದ್ದಾರೆ. ಇಲ್ಲಿಯವರೆಗೂ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಇಂದು ಮೈಸೂರಿನಲ್ಲಿ ಇದೆಲ್ಲದಕ್ಕೂ ಅಂತ್ಯ ಹಾಡ್ತಾರಾ, ಇಲ್ಲವೇ ಉಳಿದ ಹೈಕಮಾಂಡ್ ನಾಯಕರಂತೆಯೇ ರಾಹುಲ್ ಕೂಡ ಅಡ್ಡಗೋಡೆಯ ಮೇಲಿನ ದೀಪ ಉರಿಯಲು ಬಿಟ್ಟು ಹೋಗುತ್ತಾರಾ ಅನ್ನೋದೆ ಸದ್ಯದ ಕುತೂಹಲ ಮೂಡಿಸಿದೆ.














