ಮನೆ ರಾಜಕೀಯ ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್: ಆಡಿಯೊ ವೈರಲ್

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್: ಆಡಿಯೊ ವೈರಲ್

0

ರಾಯಚೂರು:  ಚುನಾವಣೆ ಸಮಯದಲ್ಲೇ ಬಿಜೆಪಿ ಶಾಸಕರೊಬ್ಬರ ಆಡಿಯೋವೊಂದು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಬಾರೀ ಸಂಚಲನ ಮೂಡಿಸಿದೆ.

ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಫೋನ್ ಸಂಭಾಷಣೆಯ ಆಡಿಯೋ ಇದಾಗಿದೆ.

ಡಾ.ಶಿವರಾಜ್ ಪಾಟೀಲ್ ತಮ್ಮ ಆಪ್ತರೊಂದಿಗೆ ಮಾತನಾಡುವಾಗ ಪ್ರಧಾನಿ ಮೋದಿ ವಿರುದ್ಧವೇ ಮಾತನಾಡಿದ್ದಾರೆ. ಅಲ್ಲದೇ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಬಗ್ಗೆಯೂ ಉಡಾಫೆ ಮಾತನಾಡಿದ್ದಾರೆ.

“ಮೋದಿ ರೈಟ್ ಹ್ಯಾಂಡ್ ಹೇಳಿದರೂ ನಾನು ಕೇಳುವುದಿಲ್ಲ. ನಾನೇ ಸಿಂಗಲ್ ಆರ್ಮಿ. ನನಗೆ ರೈಟ್, ಲೆಫ್ಟ್ ಯಾವುದು ಇಲ್ಲ. ನಾನೇ ಮೋದಿ, ನಾನೇ ಟ್ರಂಪ್. ಎಲೆಕ್ಷನ್ ನಲ್ಲಿ ಸೋತರೂ ಚಿಂತೆಯಿಲ್ಲ, ಗೆದ್ದರು ಚಿಂತೆಯಿಲ್ಲ, ಮಲಗಿದರೂ ಚಿಂತೆಯಿಲ್ಲ. ಚಿಂತೆ ಇಲ್ಲದ ಪುರುಷ ಎಂದರೆ ಅದು ಶಿವರಾಜ್ ಪಾಟೀಲ್ ಮಾತ್ರ” ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.

ಅಷ್ಟೇ ಅಲ್ಲ “ನಾನು ದೇವರಿದ್ದಂಗೆ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ. ನಾನೇ ದೈವ ಬರೆತೀನಿ” ಎಂದೆಲ್ಲ ಮಾತನಾಡಿದ್ದಾರೆ.

ಆದರೆ ಈ ಬಗ್ಗೆ  ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಶಾಸಕ ಶಿವರಾಜ್ ಪಾಟೀಲ್, “ಇದು ಬಹಳ ಹಳೇ ಆಡಿಯೊ. ಆಡೀಯೊದಲ್ಲಿರುವ ಧ್ವನಿ ನನ್ನದೇ. ಆದರೆ, ನಾನು ಆ ರೀತಿ ಮಾತನಾಡಿಲ್ಲ. ಕೆಲ ಕುತಂತ್ರಿಗಳು ದುರುದ್ದೇಶಪೂರಕವಾಗಿ ತಮಗೆ ಬೇಕಾದ ರೀತಿ ಆಡೀಯೊ ಮಾಡಿ ಹರಿಬಿಟ್ಟಿದ್ದಾರೆ. ರಾಜಕಾರಣದಲ್ಲಿ ತಂತ್ರಗಾರಿಕೆ ಇರಬೇಕು ಈ ರೀತಿ ಕುತಂತ್ರ ಮಾಡಬಾರದು” ಎಂದಿದ್ದಾರೆ.