ರಾಯಚೂರು: ಸರ್ಕಾರಿ ನಿಧಿಗಳ ದುರ್ಬಳಕೆ ಹಾಗೂ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಇಬ್ಬರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಓ) ಅಮಾನತುಗೊಳಿಸಲಾಗಿದೆ. ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಪಂ ಪಿಡಿಓ ಶಿವರಾಜ ಹಾಗೂ ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಪಂ ಪಿಡಿಓ ಗಂಗಮ್ಮ ಅವರನ್ನು ಅಮಾನತಿಗೆ ಒಳಪಡಿಸಿದ್ದಾರೆ.
ಈ ಬಗ್ಗೆ ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ಪಾಂಡ್ವೇ ರಾಹುಲ್ ತುಕಾರಾಮ್ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಇಬ್ಬರು ಅಧಿಕಾರಿಗಳ ವಿರುದ್ಧ 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಲಕ್ಷಾಂತರ ರೂ.ಗಳ ಹಣದ ದುರುಪಯೋಗ ಆರೋಪಗಳಿವೆ.
ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮ ಪಂಚಾಯತ್ ಪಿಡಿಓ ಗಂಗಮ್ಮ ಅವರ ವಿರುದ್ಧ ಕಾಮಗಾರಿಗಳ ಬಿಲ್ ಹಾಗೂ ಸಾಮಗ್ರಿಗಳ ಖರೀದಿ ಬಿಲ್‌ಗಳಲ್ಲಿ ವ್ಯತ್ಯಾಸ ಮಾಡಿರುವ ಆರೋಪ ಕೇಳಿಬಂದಿದೆ. ದಸ್ತಾವೇಜುಗಳಲ್ಲಿ ತಾರತಮ್ಯ ಮಾಡಿದ್ದು, 26,71,303 ರೂಪಾಯಿಗಳ ದುರ್ಬಳಕೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗಂಗಮ್ಮ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.
ಇದೇ ರೀತಿ ದೇವದುರ್ಗ ತಾಲೂಕಿನ ಚಿಂಚೋಡಿ ಪಿಡಿಓ ಶಿವರಾಜ ಅವರ ವಿರುದ್ಧವೂ ಗಂಭೀರ ಆರೋಪಗಳು ಬಂದಿವೆ. 15ನೇ ಹಣಕಾಸು ಯೋಜನೆಯಡಿ 52.81 ಲಕ್ಷ ರೂ. ಮೌಲ್ಯದ ಕಾಮಗಾರಿಗೆ ಸಲ್ಲಿಕೆಯಾಗಿರುವ ದಸ್ತಾವೇಜುಗಳಲ್ಲಿ ಅಪೂರ್ಣತೆ ಕಂಡುಬಂದಿದ್ದು, ಈ ಪೈಕಿ 14.77 ಲಕ್ಷ ರೂಪಾಯಿಗಳ ಖರ್ಚಿಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಇದರೊಂದಿಗೆ ಶೀಘ್ರದಲ್ಲೇ ಕ್ರಿಯಾಯೋಜನೆಯ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಾವತಿಸಿ ಸರ್ಕಾರಿ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ, ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿ, ಇಬ್ಬರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗಿದೆ.














