ಕೊಪ್ಪಳ : ರಾಜ್ಯದಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಶೋಕಾಂತ ಘಟನೆ ಮೈಸೂರಿನಿಂದ ಕೊಪ್ಪಳದ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿ ನಡೆದಿದೆ. ‘ಕನ್ನಡ ಮಾತಾಡಿ’ ಎಂದು ಕೇಳಿದ ಪ್ರಯಾಣಿಕನ ಮೇಲೆ ಟಿಕೆಟ್ ಕಲೆಕ್ಟರ್ ಹಲ್ಲೆ ನಡೆಸಿದ ಘಟನೆ ಇದೀಗ ರಾಜ್ಯದಾದ್ಯಂತ ಸಂಚಲನ ಉಂಟುಮಾಡಿದೆ.
ಏಪ್ರಿಲ್ 24ರಂದು ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಭಾಷಾ ಎಂಬವರು ಈ ಹಲ್ಲೆಗೆ ಒಳಗಾಗಿದ್ದಾರೆ. ರೈಲು ಬೆಂಗಳೂರಿನ ಯಲಹಂಕದ ಬಳಿ ತಲುಪಿದಾಗ, ಟಿಕೆಟ್ ತಪಾಸಣೆಗೆ ಟಿಕೆಟ್ ಕಲೆಕ್ಟರ್ ಬರುತ್ತಾರೆ. ಈ ವೇಳೆ, ಕೊಪ್ಪಳ ಮೂಲದ ಮೊಹಮ್ಮದ್ ಭಾಷಾ, “ಕನ್ನಡದಲ್ಲಿ ಮಾತನಾಡಿ” ಎಂದು ಕಲೆಕ್ಟರ್‌ಗೆ ಆಗ್ರಹಿಸಿದರು. ಆದರೆ ಟಿಕೆಟ್ ಕಲೆಕ್ಟರ್ “ನನಗೆ ಕನ್ನಡ ಬರೋದಿಲ್ಲ” ಎಂದು ಉತ್ತರಿಸಿ, ಭಾಷಾ ನೀಡಿದ ಸಲಹೆಗೆ ಕೋಪಗೊಂಡು ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. “ನೀವು ಕರ್ನಾಟಕದಲ್ಲಿ ಕೆಲಸ ಮಾಡುತ್ತೀರಾ, ಕನ್ನಡ ಕಲಿಯುವುದಕ್ಕೂ ಸಮಯವಿಲ್ಲವೇ?” ಎಂಬ ಮಾತಿಗೆ ಕಲೆಕ್ಟರ್ ತೀವ್ರ ಪ್ರತಿಕ್ರಿಯೆ ತೋರಿಸಿ, ಹಲ್ಲೆಗೆ ಮುಂದಾದ ಘಟನೆ ವರದಿಯಾಗಿದೆ.
ಈ ದೌರ್ಜನ್ಯದಿಂದ ಶಾಕ್ ಆದ ಮೊಹಮ್ಮದ್ ಭಾಷಾ ತಕ್ಷಣವೇ ಘಟನೆಯನ್ನು ಮೊಬೈಲ್‌ನಲ್ಲಿ ವೀಡಿಯೋವನ್ನು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗಾಗಲೇ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ನೆಟ್ಟಿಗರು ಟಿಕೆಟ್ ಕಲೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
“ಕರ್ನಾಟಕದಲ್ಲಿ ಕನ್ನಡಿಗರಿಗೆ ಭಾಷಾ ಹಕ್ಕು ಕೇಳಿದರೆ ಹಲ್ಲೆ ಎದುರಿಸಬೇಕಾ?” ಎಂಬ ಪ್ರಶ್ನೆ ಎದ್ದಿದೆ. ಸರ್ಕಾರ ಮತ್ತು ರೈಲ್ವೆ ಇಲಾಖೆ ಈ ಸಂಬಂಧ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಹಲವಾರು ಸಂಘಟನೆಗಳು ಆಗ್ರಹಿಸುತ್ತಿವೆ.