ನವದೆಹಲಿ : ಇಂದಿನಿಂದ ದೇಶದ್ಯಾಂತ ರೈಲ್ವೆ ಟಿಕೆಟ್ ದರ ಹೆಚ್ಚಳವಾಗಿದ್ದು, ಪರಿಷ್ಕೃತ ಹೊಸ ದರ ಜಾರಿಗೆ ಬಂದಿದೆ ಎಂದು ರೈಲ್ವೆ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ. ಆರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದರ ಪರಿಷ್ಕರಣೆಯಾಗಿದ್ದು, ರೈಲ್ವೆ ಇಲಾಖೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ದರಗಳು ಸಾಮಾನ್ಯ ವರ್ಗದಲ್ಲಿ 215 ಕಿ.ಮೀ ಹೆಚ್ಚಿನ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ. 215ಗಿಂತ ಹೆಚ್ಚಿನ ಪ್ರತಿ ಕಿ.ಮೀಗೆ 1 ಪೈಸೆ ಹೆಚ್ಚಳವಾಗಿದೆ. ಎಕ್ಸ್ಪ್ರೆಸ್ ರೈಲುಗಳ ನಾನ್-ಎಸಿ ಕ್ಲಾಸ್ ಹಾಗೂ ಎಲ್ಲಾ ಎಸಿ ಕ್ಲಾಸ್ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ, 500 ಕಿ.ಮೀವರೆಗೆ ನಾನ್-ಎಸಿ ಕೋಚ್‌ನಲ್ಲಿ ಪ್ರಯಾಣಿಸುವವರು ಕೇವಲ 10 ರೂ. ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲ್ವೆಯು ಕೆಲವು ವರ್ಗದ ಪ್ರಯಾಣಿಕರಿಗೆ ಯಾವುದೇ ದರ ಹೆಚ್ಚಳ ಮಾಡಿಲ್ಲ. ಉಪನಗರ ರೈಲು ಸೇವೆಗಳು, ಮಾಸಿಕ ಸೀಸನ್ ಟಿಕೆಟ್‌ಗಳು ಮತ್ತು 215 ಕಿ.ಮೀವರೆಗೆ ಸಾಮಾನ್ಯ ವರ್ಗದ ಪ್ರಯಾಣಗಳಿಗೆ ದರ ಹೆಚ್ಚಳ ಇಲ್ಲ. ಇದರಿಂದ ದಿನನಿತ್ಯ ರೈಲಿನಲ್ಲಿ ಸಂಚರಿಸುವ ಜನರಿಗೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ.
ರಾಜಧಾನಿ, ಶತಾಬ್ದಿ, ವಂದೇ ಭಾರತ್, ತೇಜಸ್, ಡುರೊಂಟೊ, ಗರೀಬ್ ರಥ ಸೇರಿದಂತೆ ಪ್ರಮುಖ ರೈಲು ಸೇವೆಗಳ ಮೂಲ ದರಗಳನ್ನು ಹೊಸ ದರ ರಚನೆಯ ಪ್ರಕಾರ ಪರಿಷ್ಕರಿಸಲಾಗಿದೆ. ಆದರೆ ಈ ಪರಿಷ್ಕರಣೆ ಎಲ್ಲ ವರ್ಗಗಳಲ್ಲೂ ಸಮಾನವಾಗಿ ಜಾರಿಗೆ ಬಂದಿದ್ದು, ಯಾವುದೇ ವಿಶೇಷ ಹೆಚ್ಚುವರಿ ಶುಲ್ಕ ವಿಧಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೀಸಲಾತಿ ಶುಲ್ಕ, ಸೂಪರ್‌ಫಾಸ್ಟ್ ಸರ್ಚಾರ್ಜ್ ಹಾಗೂ ಇತರೆ ಹೆಚ್ಚುವರಿ ಶುಲ್ಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಎಸ್‌ಟಿ ನಿಯಮಗಳು ಮತ್ತು ದರ ಪೂರ್ಣಾಂಕ ಮಾಡುವ ವಿಧಾನಗಳು ಹಿಂದಿನಂತೆಯೇ ಮುಂದುವರಿಯುತ್ತವೆ.
ಇಂದಿನಿಂದ ರೈಲುಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಟಿಟಿಇಗಳು ಅಥವಾ ಟಿಕೆಟ್ ಪರಿಶೀಲನಾ ಸಿಬ್ಬಂದಿ ನೀಡುವ ಹೊಸ ಟಿಕೆಟ್‌ಗಳಿಗೆ ಮಾತ್ರ ಪರಿಷ್ಕೃತ ದರದಲ್ಲಿ ಹಣ ವಸೂಲಿ ಮಾಡಲಾಗುತ್ತದೆ.
ಹಳೆಯ ಟಿಕೆಟ್ ಹೊಂದಿರುವ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಹಣ ವಸೂಲಿ ಮಾಡುವುದಿಲ್ಲ ಎಂದು ರೈಲ್ವೆ ತಿಳಿಸಿದೆ. ಈ ದರ ಪರಿಷ್ಕರಣೆಯಿಂದ ಭಾರತೀಯ ರೈಲ್ವೆಗೆ ಈ ವರ್ಷ ಸುಮಾರು 600 ಕೋಟಿ ರೂ. ಹೆಚ್ಚುವರಿ ಆದಾಯ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.















