ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಮುಂದಿನ 3-4 ಗಂಟೆಗಳ ಕಾಲ ಮಳೆ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಆರು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ. ಅಲ್ಲದೇ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಬಂಗಾಳ ಉಪ ಸಾಗರದ ಒರಿಸ್ಸಾದ ಕರಾವಳಿಯಲ್ಲಿ ಚಂಡಮಾರುತ ಹಿನ್ನೆಲೆ ಉತ್ತರ ಭಾಗದ ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಈ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಸೆಪ್ಟೆಂಬರ್ 6ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಇಂದಿನಿಂದ ಸೆಪ್ಟೆಂಬರ್ 6ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ಸೆಪ್ಟೆಂಬರ್ 2ರಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೆಲವು ಕಡೆ ಇಂದಿನಿಂದ ಸೆಪ್ಟೆಂಬರ್ 4ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಸೋಮವಾರ ಸಂಜೆಯಿಂದ ವರುಣನ ಆರ್ಭಟ ಜೋರಾಗಿದೆ. ಟೌನ್ ಹಾಲ್, ಕಾರ್ಪೋರೇಷನ್, ಜಯನಗರ, ಜೆಪಿ ನಗರ ಸುತ್ತಮುತ್ತ ಭಾರೀ ಮಳೆಯಾಗಿದೆ. ಸಂಜೆ ವೇಳೆಗೆ ಸುರಿದ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ಅಲ್ಲದೇ ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ ಬಾಗ್ ಸುತ್ತಮುತ್ತಲೂ ಜೋರು ಮಳೆಯಾಗಿದೆ.
ಭಾರೀ ಮಳೆಯ ಪರಿಣಾಮ ಮಲ್ಲೇಶ್ವರಂ ರಸ್ತೆಗಳು ನದಿಯಂತಾಗಿವೆ. ಮಂತ್ರಿ ಮಾಲ್, ವಲಯ ಬಿಬಿಎಂಪಿ ಕಚೇರಿ ಮುಂದೆ ಮಳೆ ನೀರು ರಸ್ತೆ ತುಂಬಿ ಹರಿಯುತ್ತಿದೆ. 2-3 ಅಡಿ ಮಳೆ, ಮೋರಿ ನೀರು ನಿಂತ ಪರಿಣಾಮ ವಾಹನ ಸವಾರರು ಹೈರಾಣಾಗಿದ್ದಾರೆ. ಅಲ್ಲದೇ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗುತ್ತಿದ್ದು, ಕೆಆರ್ ಮಾರ್ಕೆಟ್ ರಸ್ತೆಯೂ ಮಳೆ ನೀರಿನಿಂದ ತುಂಬಿದೆ ಎಂಬ ಮಾಹಿತಿ ವರದಿಯಾಗಿದೆ.














