ಮನೆ ರಾಜ್ಯ ಮಳೆ ಹಾನಿ; ಜಿಲ್ಲೆಯಲ್ಲಿ ತುರ್ತು ಪರಿಹಾರ ವಿತರಣೆ- ಸಚಿವ ಎಸ್.ಟಿ.ಸೋಮಶೇಖರ್

ಮಳೆ ಹಾನಿ; ಜಿಲ್ಲೆಯಲ್ಲಿ ತುರ್ತು ಪರಿಹಾರ ವಿತರಣೆ- ಸಚಿವ ಎಸ್.ಟಿ.ಸೋಮಶೇಖರ್

0

ಮೈಸೂರು(Mysuru): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮಳೆ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಜಿಲ್ಲೆಯ ಪರಿಸ್ಥಿತಿ ಕುರಿತು ಸಿಎಂ ಗಮನಕ್ಕೆ ತಂದರು.

ಮೈಸೂರು ನಗರ ಭಾಗಕ್ಕಿಂತ ಗ್ರಾಮಾಂತರ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಮನೆ ಹಾನಿಗೊಳಗಾದವರಿಗೆ ಜಿಲ್ಲೆಯಲ್ಲಿ ತ್ವರಿತವಾಗಿ ಪರಿಹಾರ ನೀಡಲಾಗುತ್ತಿದೆ. ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರದಲ್ಲಿ ಮಳೆಯಿಂದ ಹಾನಿ ಆಗಿದ್ದು, ಆಗಸ್ಟ್ 7ರಂದು ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಮಳೆ ಹಾನಿ ಕುರಿತು ಪರಿಹಾರ ನೀಡುವಂತೆ ಸಚಿವರು ಕೋರಿದಾಗ ಜಿಲ್ಲೆಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಮತ್ತೆ 10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು ಹೇಳಿದರು.

ಜಿಲ್ಲೆಯಲ್ಲಿ ಜೂನ್ 1ರಿಂದ ಆಗಸ್ಟ್ 5ರವರೆಗೆ 1612 ಮನೆಗಳಿಗೆ ಹಾನಿಯಾಗಿದೆ. ಹುಣಸೂರು ತಾಲೂಕಿನಲ್ಲಿ ಒಂದು ಪ್ರಾಣ ಹಾನಿಯಾಗಿದ್ದು, ತಕ್ಷಣವೇ ಮೃತ ಕುಟುಂಬದವರಿಗೆ  5 ಲಕ್ಷ ರೂ. ಪರಿಹಾರ ಹಣ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು.

ಪಿರಿಯಾಪಟ್ಟಣ, ಹುಣಸೂರು, ಸರಗೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕುಗಳಲ್ಲಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾನಿ ಪ್ರಮಾಣದ ಆಧಾರದ ಮೇಲೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. 199 ಹೆಕ್ಟೇರ್ ಕೃಷಿ ಬೆಳೆ, 221 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. 11 ಜಾನುವಾರುಗಳ ಹಾನಿಯಾಗಿದ್ದು ಪರಿಹಾರ ನೀಡಲಾಗಿದೆ ಎಂದರು.