ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವ ಹಿನ್ನೆಲೆಯಲ್ಲಿ ತಮಿಳುನಾಡು, ಕರ್ನಾಟಕದ ಸೇರಿ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭಾರತದ ಹವಾಮಾನ ಇಲಾಖೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮುಂದಿನ ಏಳು ದಿನಗಳವರೆಗೆ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಕುಸಿತದೊಂದಿಗೆ ಮಳೆಯ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದಿಂದಾಗಿ ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ ರೂಪುಗೊಂಡಿರುವ ಸಾಧಾರಣ ಚಂಡಮಾರುತದವೊಂದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ದಕ್ಷಿಣ ತಮಿಳುನಾಡು ಕಡೆಗೆ ಚಲಿಸುವುದನ್ನು ಮುಂದುವರೆಸುತ್ತದೆ ಮತ್ತು ಮುಂದಿನ 12 ಗಂಟೆಗಳಲ್ಲಿ ಕ್ರಮೇಣ ದುರ್ಬಲಗೊಳ್ಳುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. IMD ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ 5.30 ರವರೆಗೆ 2.8 ಮಿಮೀ ಮಳೆಯಾಗಿದೆ. ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ 2ಮಿ.ಮೀ ಮಳೆಯಾಗಿದ್ದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6.2ಮಿ.ಮೀ ಮಳೆಯಾಗಿದೆ.
ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ ಮತ್ತು ಕರಾವಳಿ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಡಿಸೆಂಬರ್ 12 ರಿಂದ 18 ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.
ಡಿಸೆಂಬರ್ 16 ರಿಂದ ಕೊಪ್ಪಳ, ಗದಗ, ಧಾರವಾಡ, ಹಾವೇರಿ, ರಾಯಚೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಡಿಸೆಂಬರ್ 13 ರಂದು ಕೇರಳ ಮತ್ತು ಮಾಹೆ, ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 13 ರಂದು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಡಿಸೆಂಬರ್ 13 ಮತ್ತು 14 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ.