ಚಾಮರಾಜನಗರ(Chamarajanagar): ಜಿಲ್ಲೆಯಾದ್ಯಂತ ಗುರುವಾರ ಆರಂಭವಾದ ಜಿಟಿಮಳೆಯಾಗಿದ್ದು, ಶುಕ್ರವಾರ ಬೆಳಿಗ್ಗೆಯೂ ಮುಂದುವರಿದಿದೆ.
ಮಳೆ ಹಾಗೂ ಶೀತವಾತಾವರಣದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಟಿ ಜಿಟಿ ಮಳೆಯಿಂದ ಜನರ ಓಡಾಟಕ್ಕೂ ತೊಂದರೆಯಾಗಿದೆ. ನಿರಂತರವಾಗಿ ಸುಳಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ.
ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಬೆಳಿಗ್ಗೆ 7.30ರವರೆಗೆ 6.5 ಸೆಂ.ಮೀ ಮಳೆಯಾಗಿದೆ.
ಚಾಮರಾಜನಗರ ತಾಲ್ಲೂಕಿನ ಹೊಂಗನೂರು, ಇರಸವಾಡಿ, ದೊಡ್ಡಮೋಳೆ ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 6 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ.
ಚಾಮರಾಜನಗರದ ಐತಿಹಾಸಿಕ ದೊಡ್ಡರಸನ ಕೊಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಬಹುತೇಕ ಭರ್ತಿಯಾಗಿದೆ.