ಮುಳಬಾಗಿಲು: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿದ್ದು, ಇಂದಿನಿಂದ ಆರಂಭವಾದ ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಳೆ ಬಿಡುವು ಕೊಟ್ಟ ಕೂಡಲೇ ರಥಯಾತ್ರೆಯನ್ನು ಕೂಡಲೇ ಆರಂಭ ಮಾಡಲಾಗುವುದು ಎಂದು ಹೇಳಿದ್ದಾರೆ.
ಬೆಳಗ್ಗೆಯೇ ಇತಿಹಾಸ ಪ್ರಸಿದ್ಧ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ಪೂಜೆ, ಹೋಮ ನೆರವೇರಿಸಿದ ನಂತರ ರಥಯಾತ್ರೆಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹಾಗೂ ನಾನು ಚಾಲನೆ ನೀಡಿದೆವು. ಆದರೆ, ಮಳೆ ಹೆಚ್ಚಾದ ಕಾರಣಕ್ಕೆ ಬೃಹತ್ ಸಮಾವೇಶ ರಥಯಾತ್ರೆ ಹಾಗೂ ಗ್ರಾಮ ವಾಸ್ತವ್ಯವನ್ನು ಒಂದು ವಾರ ಮುಂದಕ್ಕೆ ಹಾಕಲಾಗಿದೆ ಎಂದು ತಿಳಿಸಿದರು.
ಇವತ್ತಿನ ಕಾರ್ಯಕ್ರಮಕ್ಕೆ ವರುಣನ ಸಿಂಚನ ಆಗಿದೆ. ರಭಸವಾಗಿ ಸುರಿದ ಕಾರಣ ಬಹಿರಂಗ ಸಭೆ, ರಥಯಾತ್ರೆ, ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ. ಬೆಳಗ್ಗೆಯಿಂದ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಆಯಿತು. ದೇವರ ಪ್ರಸಾದ ಕೂಡ ಆಯಿತು. ಆದರೆ ಮಳೆ ಕಾರಣಕ್ಕೆ ಎಲ್ಲರ ಸಲಹೆ ಪಡೆದು ರಥಯಾತ್ರೆ ಮುಂದೂಡಿದ್ದೇವೆ. ಒಂದು ವಾರದ ನಂತರ ಮುಳಬಾಗಿಲು ಪಟ್ಟಣದಿಂದಲೇ ಯಾತ್ರೆ ಶುರು ಮಾಡುತ್ತೇವೆ ಎಂದರು.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ ನಾಲ್ಕೈದು ದಿನಗಳು ಮಳೆ ಬರಲಿದೆ ಎಂದಿದೆ. ಹೀಗಾಗಿ ಜನರಿಗೆ ತೊಂದರೆ ಆಗದಂತೆ ಮುಂದಕ್ಕೆ ಹಾಕಿದ್ದೇವೆ. ಇವತ್ತು ಬಹಳ ದೊಡ್ಡ ಮಟ್ಟದಲ್ಲಿ ಜನತೆ ಬೆಂಬಲ ನೀಡಿದ್ದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದಿದ್ದರು. ಮಳೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸುವುದು ಕಷ್ಟವಾಗಿದೆ. ಮಳೆಯ ಸೂಚನೆ ನೋಡಿಕೊಂಡು ಕಾರ್ಯಕ್ರಮ ಮಾಡಲಾಗುವುದು. ಎರಡು ದಿನಗಳಲ್ಲಿ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದರು.
ಬೃಹತ್ ಸಮಾವೇಶದಲ್ಲಿ ಮುಂದಿನ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿ, ಅವರಿಗೆ ಪಕ್ಷ ನಿಷ್ಠೆಯ ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮ ಇತ್ತು. ಆದರೆ, ವಾರದ ನಂತರದ ಸಮಾವೇಶದಲ್ಲಿ ಪಟ್ಟಿ ಘೋಷಣೆ, ಪ್ರಮಾಣ ವಚನ ಬೋಧನೆ ಎರಡನ್ನೂ ಮಾಡಲಾಗುವುದು.
ಈಗಾಗಲೇ ಅಭ್ಯರ್ಥಿಗಳಿಗೆ ಸೂಚನೆ ಕೊಡಲಾಗಿದ್ದು, ಅವರೆಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷವೇ ಅವರಿಗೆ ಸೂಚನೆ ನೀಡಲಾಗಿದೆ ಸಂಭವನೀಯ ಎಲ್ಲಾ ಅಭ್ಯರ್ಥಿಗಳನ್ನು ಮುಳಬಾಗಿಲಿಗೆ ಕರೆಯಲಾಗಿತ್ತು.
ಕೆಸಿಆರ್ ಅವರ ಪ್ರತಿನಿಧಿ ಹಾಜರು:
ರಥಯಾತ್ರೆ ಚಾಲನೆ ಹಾಗೂ ಬೃಹತ್ ಸಮಾವೇಶಕ್ಕೇ ತೆಲಂಗಾಣ ಮುಖ್ಯಮಂತ್ರಿ ಹಾಗೂ ಭಾರತ್ ರಾಷ್ಟ್ರ ಸಮಿತಿ ನಾಯಕ ಕೆ.ಚಂದ್ರಶೇಖರ ರಾವ್ ಅವರು ಶಾಸಕ ರಾಜೇಂದರ್ ರೆಡ್ಡಿ ಅವರನ್ನು ಕಳಿಸಿದ್ದಾರೆ. ಅವರ ಆಗಮನ ನಮಗೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ:
ರಾಜ್ಯ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವಂತೆ ಆಗಿದೆ. ಬಿಜೆಪಿ ನಡವಳಿಕೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಶಾಸಕರನ್ನು ಖರೀದಿ ಮಾಡಿ ಸರಕಾರ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಕೊಡುವ ಕಾಲ ಹತ್ತಿರದಲ್ಲೇ ಇದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರದ ಸಮೃದ್ಧಿ ಮಂಜುನಾಥ್, ಹಿರಿಯ ಮುಖಂಡರಾದ ಬಂಡೆಪ್ಪ, jlji.ತಿ ಕಾಶೇಂಪೂರ್, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಟಿ. ಎ.ಶರವಣ, ಗೋವಿಂದರಾಜು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.