ಮೈಸೂರು(Mysuru): ಶೈಕ್ಷಣಿಕ ಸಂಸ್ಥೆಯ ಆವರಣದೊಳಗೆ ಯಾವುದೇ ತಂಬಾಕು ಉತ್ಪನ್ನಗಳ ಬಳಕೆ ಆಗದಂತೆ ಕ್ರಮವಹಿಸಬೇಕು. ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ತಂಬಾಕು ಬೆಳೆಯನ್ನು ಬಿಟ್ಟು ಬೇರೆ ಪರ್ಯಾಯ ಬೆಳೆಯನ್ನು ಆಯ್ದುಕೊಂಡು ಮಾದರಿಯಾಗಿರುವ ರೈತರನ್ನು ಗುರುತಿಸಿ ಅಂತವರಿಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರೋತ್ಸಾಹ ಧನವನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಿ. ಅಂತಹ ರೈತರನ್ನು ಇತರೆ ತಂಬಾಕು ಬೆಳೆಯುವ ರೈತರಿಗೆ ಪರಿಚಯಿಸಿ ಇದರ ವರದಿಯನ್ನು ತಯಾರಿಸಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಸಲ್ಲಿಸಬೇಕು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇದರ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಘೋಷಿಸಬೇಕಾಗಿದ್ದು, ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆ ಆವರಣದೊಳಗೆ “ತಂಬಾಕು ಮುಕ್ತ ಪ್ರದೇಶ ‘ನಾಮಫಲಕ (ಸಂಕೇತಗಳ) ಪ್ರದರ್ಶನ ಹೆಸರು/ಹುದ್ದೆ/ಸಂಪರ್ಕ ಸಂಖ್ಯೆಯನ್ನು ಉಲ್ಲೇಖಿಸುವುದು, ಬರೆಸುವುದು, ಶಿಕ್ಷಣ ಸಂಸ್ಥೆಯ ಪ್ರವೇಶ/ ಗಡಿ ಗೋಡೆಯಲ್ಲಿ “ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ”ಸಂಕೇತ (ನಾಮಫಲಕ)ಗಳ ಪ್ರದರ್ಶನ ಹೆಸರು/ಹುದ್ದೆ/ಸಂಪರ್ಕ ಸಂಖ್ಯೆಯನ್ನು ಉಲ್ಲೇಖಿಸಬೇಕು ಮತ್ತು ಬರೆಸಬೇಕು ಎಂದರು.
ಆವರಣದೊಳಗೆ ತಂಬಾಕು ಸೇವನೆಯಿಂದಾಗುವ ದುಷ್ಪಾರಿಣಾಮಗಳ ಕುರಿತು ಭಿತ್ತಿ ಪತ್ರ ಅಥವಾ ಇತರೆ ಜಾಗೃತಿ ಫಲಕಗಳ ಪ್ರದರ್ಶನಗಳನ್ನು ಮಾಡಬೇಕು. ಶೈಕ್ಷಣಿಕ ಸಂಸ್ಥೆ ವತಿಯಿಂದ ತಂಬಾಕು ನಿಯಂತ್ರಣದ ಬಗ್ಗೆ ಚಟುವಟಿಕೆ ನಡೆಸಿರುವ ಕುರಿತು ಮಾಹಿತಿಯ ವರದಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.