ಬೆಂಗಳೂರು : ಪಾಕಿಸ್ತಾನ ಪರ ಘೋಷಣೆ ಕೂಗುವುದು ಯಾವ ಕಾರಣಕ್ಕೂ ನ್ಯಾಯಸಿದ್ಧವಲ್ಲ, ಅದನ್ನು ತೀವ್ರವಾಗಿ ಖಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂತಹ ಕೃತ್ಯ ದೇಶದ್ರೋಹಕ್ಕೆ ಸಮಾನ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ನಡೆದಿರುವ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರವಾದ ಯಾವುದೇ ವರ್ತನೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಂಗಳೂರಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದಿದ್ದಕ್ಕೆ ಹತ್ಯೆಯಾಗಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಸಿಎಂ, ಯಾರು ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರು? ಯಾರೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ರೆ ಅದು ತಪ್ಪು. ಈ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
“ಯಾರೇ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿದ್ರು, ಅದು ತಪ್ಪು. ಹಾಗೆ ಮಾಡಿದರೆ ಅದು ದೇಶದ್ರೋಹಕ್ಕೆ ತಕ್ಕದ್ದು. ನಾವು ಇದನ್ನು ಕಠಿಣವಾಗಿ ತೆಗೆದುಕೊಂಡಿದ್ದೇವೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಮತ್ತು ಈಗಾಗಲೇ 15 ಮಂದಿಯನ್ನು ಬಂಧಿಸಲಾಗಿದೆ,” ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜ್ಯ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಸ್ಪಷ್ಟ ಸಂದೇಶ ನೀಡಿದ್ದು, ರಾಷ್ಟ್ರದ ವಿರುದ್ಧದ ಯಾವುದೇ ಪ್ರಚೋದನೆ, ನಿಷೇಧಿತ ಘೋಷಣೆಗಳಿಗೆ ಯಾವುದೇ ಸಹಿಷ್ಣುತೆ ಇಲ್ಲವೆಂಬುದನ್ನು ತೋರಿಸುತ್ತದೆ.
ಇದೇ ವೇಳೆ, ಬಸವ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಬಸವೇಶ್ವರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಸಚಿವ ಎಂಬಿ ಪಾಟೀಲ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮತ್ತು ಹಲವಾರು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಬಸವೇಶ್ವರರು ಸಮಾಜದ ಪರಿವರ್ತಕರಾಗಿದ್ದು, ಅವರ ತತ್ತ್ವಗಳನ್ನು ಪಾಲಿಸುವುದು ಪ್ರಸ್ತುತ ಸಮಯದಲ್ಲಿಯೂ ಮಹತ್ವದ ವಿಚಾರವಾಗಿದೆ ಎಂಬ ಸಂದೇಶವನ್ನು ಸಿಎಂ ಅವರು ಈ ಸಂದರ್ಭದಲ್ಲಿ ನುಡಿದರು.














