ಮನೆ ರಾಜ್ಯ ರೈತ ದಸರಾಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ: ಎನ್ ಚೆಲುವರಾಯಸ್ವಾಮಿ

ರೈತ ದಸರಾಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ: ಎನ್ ಚೆಲುವರಾಯಸ್ವಾಮಿ

0

 ಮೈಸೂರು: ಮೈಸೂರೆಂಬ ಪುಣ್ಯ ನೆಲದದಲ್ಲಿ ರೈತ ದಸರಾವನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತಿದ್ದು, ರೈತ ದಸರಾಕ್ಕೆ ಅಪೂರ್ವವಾದ ಬೆಂಬಲ ದೊರೆಯುತ್ತಿದೆ.  ರೈತ ದಸರಾ ಉದ್ಘಾಟನೆಯನ್ನು ಮಾಡುತ್ತಿರುವುದು ವೈಯಕ್ತಿಕವಾಗಿ ಸಂತೋಷವನ್ನು ನೀಡಿದೆ ಎಂದು ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಸಂತಸ ವ್ಯಕ್ತಪಡಿಸಿದರು.

Join Our Whatsapp Group

ಇಂದು ಮೈಸೂರು ದಸರಾ ಅಂಗವಾಗಿ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ, ರೈತ ದಸರಾ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿಖ್ಯಾತ ಮೈಸೂರು ದಸರಾ 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಇತಿಹಾಸ ಪೂರ್ವಕವಾದಂತಹ ಮಹೋತ್ಸವ ನಮ್ಮ ಮೈಸೂರು ದಸರಾ. ಇದು ರಾಜ್ಯ ಮತ್ತು ರಾಷ್ಟ್ರಕ್ಕೆ ಸೀಮಿತವಾಗಿರದೆ ಅಂತರಾಷ್ಟ್ರೀಯ ಮಟ್ಟದಲ್ಲೂ ವಿವಿಧ ಭಾಷೆಯ ಜನರ ಮನ್ನಣೆಯನ್ನು ಪಡೆದುಕೊಂಡಿದ್ದು, ದಸರಾವನ್ನು ವೀಕ್ಷಿಸಲು ಲಕ್ಷಾಂತರ ಜನರು ಬರುವುದು ಪರಂಪರೆಯಾಗಿದೆ ಎಂದರು.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು ಕಡಿಮೆಯಾಗಿದೆ. ಅದಕ್ಕಾಗಿಯೇ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು 1000 ಕೋಟಿ ಮಿಷನರಿಗೆ ಸಹಾಯಧನ ಹಾಗೂ ಅನುದಾನವನ್ನು ನೀಡುವುದರ ಜೊತೆಗೆ  ರೈತರಿಗೆ 1,900 ಕೋಟಿ ವಿಮೆ ನೀಡಿದ್ದಾರೆ. ಅದನ್ನು ಪ್ರತಿಯೊಬ್ಬ ರೈತರು ಸದುಪಯೋಗ ಪಡಿಸಿಕೊಂಡು ದೇಶವನ್ನು ಅಭಿವೃದ್ದಿಯತ್ತ ಸಾಗಿಸುವ ನಿಟ್ಟಿನಲ್ಲಿ ದುಡಿಯಬೇಕು ಎಂದರು.

ಪ್ರತಿಯೊಬ್ಬ ರೈತನಿಗೂ ತಾವು ಬೆಳೆದಂತ ಬೆಳೆಗಳು ಸುರಕ್ಷಿತವಾಗಿ ಕೈಸೇರಬೇಕು ಹಾಗೂ ಯಾವುದೇ ಅನ್ಯಾಯ ಆಗದಂತೆ ಅದಕ್ಕೆ ನ್ಯಾಯಯುತವಾದ ಬೆಲೆ ಸಿಗಬೇಕು. ನಮ್ಮ ಮೊದಲ ಆದ್ಯತೆ ರೈತರೇ ಆಗಿದ್ದು, ರೈತರಿಗೆ ಸಾಲವನ್ನು ನೀಡುವ ಮೂಲಕ ಕೃಷಿಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರದಿಂದ ಸಿದ್ಧವಿದೆ ಎಂದು ತಿಳಿಸಿದರು.

ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ, ರೈತ ದಸರಾ ಎಂಬುದು ಒಂದು ಆತ್ಮೀಯವಾದ ಕಾರ್ಯಕ್ರಮವಾಗಿದ್ದು, ಮನಸ್ಸಿಗೆ ಸಂತೋಷ ಉಂಟು ಮಾಡುವಂತಹ ಅನೇಕ ವಿಚಾರಗಳಿಂದ ಕೂಡಿದೆ ಎಂದು ಹೇಳಿದರು.

ನಮ್ಮಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಲ್ಲಿದ್ದರೂ ಅವುಗಳನ್ನು ರೈತರು ಅಳವಡಿಸಿಕೊಳ್ಳುವುದು ಕಡಿಮೆಯಾಗಿದೆ. ಪ್ರತಿಯೊಬ್ಬ ರೈತರು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡಿದರೆ ಅವರಿಗೆ ಸಹಾಯದ ಜೋತೆಗೆ ಖರ್ಚು ಕಡಿಮೆಯಾಗುತ್ತದೆ. ಇದರಿಂದ ಉತ್ತಮ ಆದಾಯವನ್ನೂ ಪ್ರತಿಯೊಬ್ಬ ರೈತರು ಪಡೆದುಕೊಳ್ಳಬಹುದು. ರೈತರ ಅನೇಕ ಸಮಸ್ಯೆಗಳಿಗೆ ಹೊಸ ಹೊಸ ಯೋಜನೆ ಮೂಲಕ ಸಹಾಯ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ಹೇಳಿದರು.

ರೈತ ದಸರಾ ಸಮಿತಿಯ ಅಧ್ಯಕ್ಷರಾದ ಕರೀಗೌಡ ರವರು ಮಾತನಾಡಿ, ಅನ್ನ ಇದ್ದರೆ ಮಾತ್ರ ನಮ್ಮ ಪ್ರಾಣ ಉಳಿಯುತ್ತೆ, ಪ್ರಾಣ ಇದ್ದರೆ ನಾವು ಬದುಕುತ್ತೇವೆ ಎಂಬ ನುಡಿಯು ಮಹತ್ವವಾಗಿದ್ದು, ಪ್ರಪಂಚದ ಸಕಲ ಜೀವಿಗಳಿಗೆ ಅನ್ನದಾನ ಮಾಡುತ್ತಿರುವವರು ರೈತರು. ಅವರಿಗೆ ನಾವು ಯಾವಾಗ ಹೆಚ್ಚು ಒತ್ತು ಕೊಡುವುದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬ ರೈತನು ಕೃಷಿಯನ್ನು ಪ್ರಧಾನವಾಗಿ ಅಳವಡಿಸಿಕೊಂಡರೆ ಮಾತ್ರ ಆತ ಕೃಷಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಇಲ್ಲವಾದರೆ ಆತ ಕೃಷಿಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಅದನ್ನು ಅರಿತು ಪ್ರತಿಯೊಬ್ಬ ರೈತನು ಕೃಷಿಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು ಎಂದರು.

ಅರಮನೆಯ ಕೋಟೆ ಆಂಜನೇಯ ಮೈದಾನದಿಂದ ದೇವರಾಜ ಅರಸು ರಸ್ತೆಯ ಮೂಲಕ ಜಿ.ಕೆ ಗ್ರೌಂಡ್ ವರೆಗೂ ಸಾಗಿದ ರೈತ ದಸರಾ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಈ ಬಾರಿ ವಿಶೇಷವಾಗಿ ನಂದಿ ಧ್ವಜ, ನಗಾರಿ ಹಾಗೂ ತಮಟೆ, ವೀರಗಾಸೆ ವಿರಭದ್ರ ನೃತ್ಯ ಖಡ್ಗ ಪ್ರದರ್ಶನ, ಚಿಲಿಪಿಲಿ ಗೊಂಬೆ, ನಾದಸ್ವರ ಪೂಜೆ ಕುಣಿತ. ಜೊತೆಗೆ ಬಂಡೂರು ಕುರಿ, ಎತ್ತಿನ ಗಾಡಿ ಎತ್ತುಗಳನ್ನು ಕರೆಸಲಾಗಿತ್ತು. ಹೊಸ ಹೊಸ ಕೃಷಿ ತಂತ್ರಜ್ಞಾನಗಳಾದ ಡ್ರೋನ್-2 (ಕೃಷಿ ಔಷದ ಸಿಂಪಡಣ ಡ್ರೋನ್), ಕಬ್ಬು ಕಟಾವು ಯಂತ್ರ, ಕಬ್ಬು ನಾಟಿ ಯಂತ್ರ, ಬೂಮ್ ಸ್ಪೇರ್, ಕಂಬೈoಡ್, ಹಾರ್ವೆಸ್ಟರ್, ಮಿನಿ ಕಾರ್ಟ್, ಬಯೋಜಾರ್ ಯಂತ್ರ, ಅರಣ್ಯ ಇಲಾಖೆಯ ಟ್ಯಾಬ್ಲೋ, ತೋಟಗಾರಿಕೆ ಇಲಾಖೆಯ ಟ್ಯಾಬ್ಲೋಗಳಂತಹ ಹೊಸಹೊಸ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ರೈತ ದಸರಾದ ಉಪಾಧ್ಯಕ್ಷರಾದ ಜಾಕಿರ್ ಹುಸೇನ್, ಶಿವಕುಮಾರ್, ಮಂಜುನಾಥ್ ಹೆಚ್.ಎಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.