ಮನೆ ರಾಜ್ಯ ಪರಾರಿಯಾಗಿದ್ದ ಧಮ್ಕಿ ಪುಢಾರಿ ರಾಜೀವ್‌ ಗೌಡ ಕೊನೆಗೂ ಅರೆಸ್ಟ್‌..!

ಪರಾರಿಯಾಗಿದ್ದ ಧಮ್ಕಿ ಪುಢಾರಿ ರಾಜೀವ್‌ ಗೌಡ ಕೊನೆಗೂ ಅರೆಸ್ಟ್‌..!

0

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡರಿಗೆ ನಿಂದನೆ ಹಾಗೂ ಧಮ್ಕಿ ನೀಡಿದ ಆರೋಪದ ಹಿನ್ನೆಲೆ ಕೊನೆಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಬಂಧಿಸಲಾಗಿದೆ. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು (ಜನವರಿ 26) ಕೇರಳ ಗಡಿಯಲ್ಲಿ ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬ್ಯಾನರ್ ವಿಚಾರಕ್ಕೆ ಜನವರಿ 12ರಂದು ಪೌರಾಯುಕ್ತೆ ಅಮೃತಾಗೌಡಗೆ ಕರೆ ಮಾಡಿ ಧಮ್ಕಿ ಹಾಕಿದ್ದು, ಈ ಬಗ್ಗೆ ಜನವರಿ 14ರಂದು ದೂರು ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಇಂದು ಬೆಳಗ್ಗೆ ಅಷ್ಟೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾನೆ ಎನ್ನುವ ಸುಳಿವು ಸಿಕ್ಕ ಬೆನ್ನಲ್ಲೇ ಪೊಲೀಸರು ಸಹ ಅಲರ್ಟ್​ ಆಗಿದ್ದರು. ಆದ್ರೆ, ಪೊಲೀಸರು ಬಂಧನಕ್ಕೆ ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ರಾಜೀವ್ ಗೌಡ ಮಂಗಳೂರಿನಿಂದ ಎಸ್ಕೇಪ್ ಆಗಿದ್ದ.

ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತೆ ಅಮೃತಾಗೌಡ ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿತ್ತು. ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣ ವಿಚಾರವಾಗಿ ರಾಜೀವ್​​ ಗೌಡನನ್ನು ಪೊಲೀಸರು ಇನ್ನೂ ಬಂಧಿಸದ ಬಗ್ಗೆ ಸ್ವಪಕ್ಷ ಕಾಂಗ್ರೆಸ್​​ನಲ್ಲಿಯೇ ಆಕ್ರೋಶ ಭುಗಿಲೆದ್ದಿತ್ತು. ರಾಜೀವ್ ಗೌಡ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್ ಮೊರೆ ಹೋದಾಗ ವಿಚಾರಣೆ ಮಾಡಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ರಾಜೀವ್ ಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಯಾವುದೇ ಷರತ್ತುಗಳಿಲ್ಲದೆ ವಜಾಗೊಳಿಸಿ, ವಿಚಾರಣೆಯನ್ನು ಜನವರಿ 24ಕ್ಕೆ ಮುಂದೂಡಿತ್ತು. ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಶತಾಯಗತಾಯ ರಾಜೀವ್ ಗೌಡನ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿ, ಕೊನೆಗೂ ಬಂಧಿಸಿದ್ದಾರೆ.

ಶಿಡ್ಲಘಟ್ಟ ನಗರದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಕ್ಕಾಗಿ ಪೌರಾಯುಕ್ತೆ ಅಮೃತಾ ಅವರಿಗೆ ದೂರವಾಣಿ ಕರೆ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿತ್ತು. ಇನ್ನು ಈ ಪ್ರಕರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ರಾಜೀವ್​ ಗೌಡನನ್ನು ಪಕ್ಷದಿಂದ ಅಮಾನತುಗೊಳಿಸಿ ಶಿಸ್ತು ಸಮಿತಿಗೆ ಆದೇಶ ಹೊರಡಿಸಿದೆ.