ಚಿಕ್ಕಬಳ್ಳಾಪುರ : ಶಿಡ್ಲಘಟ್ಟದ ಪೌರಾಯುಕ್ತರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ದೂರು ದಾಖಲಾಗಿ ವಾರ ಕಳೆದರೂ ಈವರೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ ಆಗಿಲ್ಲ. ಘಟನೆ ನಡೆದ ದಿನದಿಂದಲೂ ರಾಜೀವ್‌ಗೌಡ ಭೂಗತವಾಗಿದ್ದಾರೆ. ಆದಷ್ಟು ಬೇಗ ರಾಜೀವ್‌ಗೌಡನ್ನು ಬಂಧಿಸುವಂತೆ ಆಗ್ರಹ ಕೇಳಿ ಬಂದಿದ್ದು, ಈ ನಡುವೆ ರಾಜೀವ್ ಗೌಡಗೆ ಪ್ರಭಾವಿಗಳ ಕೃಪಾಕಟಾಕ್ಷ ಇದೆ ಅಂತ ಬಿಜೆಪಿ-ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಪೊಲೀಸರು ಮಾತ್ರ ರಾಜೀವ್‌ಗೌಡ ಬಂಧನಕ್ಕೆ ಬಲೆ ಬೀಸಿದ್ದೇವೆ ಆದಷ್ಟು ಬೇಗ ಬಂಧಿಸುತ್ತೇವೆ ಎಂದಿದ್ದಾರೆ.
ಶಿಡ್ಲಘಟ್ಟದ ಪೌರಾಯುಕ್ತರಿಗೆ ಅಸಭ್ಯವಾಗಿ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪ್ರಕರಣವು ಈಗ ‘ಜನಸಾಮಾನ್ಯರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯನಾ?’ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿದೆ. ಸರ್ಕಾರಿ ಮಹಿಳಾ ಅಧಿಕಾರಿಗೆ ಅಸಭ್ಯವಾಗಿ ಮಾತನಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿ ದಿನಗಳೇ ಕಳೆದಿದ್ದರೂ, ಪೊಲೀಸರು ಇನ್ನೂ ರಾಜೀವ್ ಗೌಡರನ್ನು ಬಂಧಿಸದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಎಫ್‌ಐಆರ್ ದಾಖಲಾಗಿ ಒಂದು ವಾರವಾದರೂ ಬಂಧಿಸದಿರೋದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜೀವ್‌ಗೌಡ ಬೆನ್ನಿಗೆ ಪ್ರಭಾವಿ ಸಚಿವರು ನಿಂತಿರೋ ಮಾತು ಕೇಳಿಬರುತ್ತಿದೆ. ನಿನ್ನೆ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರೋ ಬೆನ್ನಲ್ಲೇ ಪುಢಾರಿ ಬಂಧನಕ್ಕೆ ಒತ್ತಡ ಜಾಸ್ತಿಯಾಗಿದೆ. ಯಾವುದೇ ಕಾರಣಕ್ಕೂ ಪ್ರಭಾವಿಗಳನ್ನು ರಕ್ಷಿಸೋ ಪ್ರಶ್ನೆಯೇ ಇಲ್ಲ ಅಂತ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಶಿಡ್ಲಘಟ್ಟ ಪೌರಾಯುಕ್ತರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಎಫ್‌ಐಆರ್ ದಾಖಲಾಗಿ ಒಂದು ವಾರ ಕಳೆದರೂ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ತಂಡಗಳು ಬೆಂಗಳೂರು ಸೇರಿದಂತೆ ವಿವಿಧೆಡೆ ತೀವ್ರ ಶೋಧ ನಡೆಸುತ್ತಿವೆ. ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಮಾತನಾಡಿ ರಾಜೀವ್ ಗೌಡ ನಟೋರಿಯಸ್ ಕ್ರಿಮಿನಲ್ ಎಂದಿದ್ದಾರೆ. ರಾಜೀವ್ ಗೌಡ ವಿರುದ್ದ ಒಟ್ಟು 16 ಪ್ರಕರಣಗಳಿವೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಹುಡುಕಾಡುತ್ತಿದ್ದೇವೆ. ರಾಜೀವ್ ಗೌಡನನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದಿದ್ದಾರೆ.















