ಗುಜರಾತ್‌ನ ರಾಜ್‌ಕೋಟ್ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.
“ಪ್ರಾಥಮಿಕವಾಗಿ, ಮಾನವ ನಿರ್ಮಿತ ವಿಪತ್ತು ಸಂಭವಿಸಿದೆ, ಅಲ್ಲಿ ಮಕ್ಕಳ ಮುಗ್ಧ ಜೀವಗಳು ಬಲಿಯಾಗಿದ್ದು ಉಂಟಾದ ಜೀವಹಾನಿಗಾಗಿ ಕುಟುಂಬಗಳು ದುಃಖಿಸುತ್ತಿವೆ” ಎಂದು ಭಾನುವಾರ ನಡೆದ ವಿಶೇಷ ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ.
ಶನಿವಾರ ಸಂಜೆ, ರಾಜ್‌ಕೋಟ್‌ನ ಗೇಮಿಂಗ್ ವಲಯದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 27 ಜನರು ಪ್ರಾಣ ತೆತ್ತಿದ್ದರು. ಜರಾತ್ ಸಮಗ್ರ ಸಾಮಾನ್ಯ ಅಭಿವೃದ್ಧಿ ನಿಯಂತ್ರಣ ನಿಯಮಾವಳಿಗಳ ಲೋಪದೋಷದ ಲಾಭ ಪಡೆದು ಗೇಮಿಂಗ್ ಝೋನ್ ಅಕ್ರಮ ಮನರಂಜನಾ ಚಟುವಟಿಕೆಗೆ ಎಡೆ ಮಾಡಿಕೊಟ್ಟಿರಬಹುದು ಎಂಬ ಸುದ್ದಿ ವರದಿಗಳ ಬಗ್ಗೆ ನ್ಯಾಯಾಲಯ ಆಘಾತ ವ್ಯಕ್ತಪಡಿಸಿದೆ.
ಗೇಮಿಂಗ್ ಝೋನ್ ಅನುಮತಿ ಪಡೆಯುವಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ ತಗಡಿನ ರಚನೆಗಳ ಮೊರೆ ಹೋಗಿತ್ತು ಎಂದು ಕೆಲ ಗುಜರಾತಿ ಪತ್ರಿಕೆಗಳು ವರದಿ ಮಾಡಿವೆ.
ಅಲ್ಲದೆ ಅಂತಹ ಗೇಮಿಂಗ್ ಝೋನ್‌ಗಳು ರಾಜ್‌ಕೋಟ್ ಮಾತ್ರವಲ್ಲದೆ ರಾಜ್ಯದ ರಾಜಧಾನಿ ಅಹಮದಾಬಾದ್‌ನಲ್ಲಿಯೂ ಇದ್ದು ಜನರ ಸುರಕ್ಷತೆಗೆ ಗಮನಾರ್ಹ ಅಪಾಯ ಉಂಟುಮಾಡುವಂತಿವೆ ಎಂದು ನ್ಯಾಯಾಲಯ ತಿಳಿಸಿದೆ.
ಮೇಲ್ನೋಟಕ್ಕೆ ಈ ವಿಪತ್ತು ಮಾನವ ನಿರ್ಮಿತ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಹೀಗಾಗಿ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಿಗೆ ಅದು ನಿರ್ದೇಶನ ನೀಡಿತು. ಸೂರತ್, ಅಹಮದಾಬಾದ್, ರಾಜ್‌ಕೋಟ್ ಹಾಗೂ ಬರೋಡಾದ ನಗರ ಪಾಲಿಕೆಗಳಿಂದ ಗೇಮಿಂಗ್ ಜೋನ್, ಮನರಂಜನಾ ಸೌಲಭ್ಯ ಕಲ್ಪಿಸಲು ಇಲ್ಲವೇ ಮುಂದುವರೆಸಲು ಅಗತ್ಯವಾದ ನಿಬಂಧನೆಗಳ ಕುರಿತು ಅದು ಪ್ರತಿಕ್ರಿಯೆ ಕೇಳಿತು.
ಈ ಝೋನ್‌ಗಳು ಸಿಜಿಡಿಸಿಆರ್‌ನಲ್ಲಿನ ಲೋಪದೋಷಗಳನ್ನು ಬಳಸಿಕೊಂಡಿವೆ ಎಂದು ವೃತ್ತಪತ್ರಿಕೆಗಳ ವರದಿ ಸೂಚಿಸುತ್ತಿದ್ದು ಅಗ್ನಿ ಸುರಕ್ಷತಾ ನಿಯಮಗಳ ಬಳಕೆಗೆ ಪರವಾನಗಿ ಪಡೆಯುವುದು ಮತ್ತು ನಿಯಮ ಪಾಲಿಸುವ ಕುರಿತು ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಹೊಂದಿರುವ ಪಾಲಿಕೆಗಳು ಯಾವ ಕ್ರಮ ಕೈಗೊಂಡಿವೆ ಎಂದು ತಿಳಿಯಲು ಬಯಸುವುದಾಗಿ ನ್ಯಾಯಾಲಯ ಹೇಳಿದೆ. ಅಂತೆಯೇ ನಾಳೆ (ಸೋಮವಾರ) ತನ್ನೆದುರೇ ಪ್ರಕರಣ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಹೈಕೋರ್ಟ್ ಪೀಠ ಸೂಚಿಸಿದೆ.