ಮೈಸೂರು: ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ 92 ವರ್ಷದ ಸೋಲಿಗರ ಮಾದಮ್ಮ ಚಾಮರಾಜನಗರ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಸೂಲಗಿತ್ತಿ ಮತ್ತು ಬುಡಕಟ್ಟು ವೈದ್ಯ ಪದ್ಧತಿಯನ್ನು ಉತ್ತೇಜಿಸುವ ಮೂಲಕ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾದಮ್ಮ ಪಡೆದುಕೊಂಡಿದ್ದಾರೆ.
ಸೋಲಿಗ ಬುಡಕಟ್ಟು ಸಮುದಾಯದ ಮಾದಮ್ಮ ಅವರು ಇತ್ತೀಚೆಗೆ ಹನೂರು ತಾಲೂಕಿನ ಜೀರಿಗೆ ದೊಡ್ಡಿ ಗ್ರಾಮಕ್ಕೆ ವಿದ್ಯುತ್ ಪೂರೈಕೆಗಾಗಿ ಹೋರಾಟ ನಡೆಸಿ ಸುದ್ದಿಯಾಗಿದ್ದರು. ವಸತಿ ಸಚಿವ ವಿ.ಸೋಮಣ್ಣ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅವರ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗಿದೆ.
ಜಿಲ್ಲಾಡಳಿತವು ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ಮಾಡುವುದರೊಂದಿಗೆ, ಶಾಲಾ ಶಿಕ್ಷಕಿ ಮತ್ತು ಪಂಚಾಯತ್ ಅಧಿಕಾರಿಗಳು ಮಾದಮ್ಮ ಅವರಿಗೆ ನಾಲ್ಕು ಗಂಟೆಗಳ ಕಾಲ ತರಬೇತಿ ನೀಡಿ ಮತದಾನದ ಮಹತ್ವ ಹಾಗೂ, ಮತದಾರರಿಗೆ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿರುವ ವಿಡಿಯೋ ರೆಕಾರ್ಡ್ ಮಾಡಿದರು.
ಮತದಾನ ನಮ್ಮ ಹಕ್ಕು, ದೇಶದ ಹಿತದೃಷ್ಟಿಯಿಂದ ಮತದಾನ ಒಳ್ಳೆಯದು ನಮ್ಮ ಅಭಿವೃದ್ಧಿಗಾಗಿ ನಾವು ಮತ ಚಲಾಯಿಸಬೇಕು ಎಂದು ವಿಡಿಯೋದಲ್ಲಿ ಮಾದಮ್ಮ ಕರೆ ನೀಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ ನಂತರ ಅನೇಕ ಜನರು ತಮ್ಮ ದೂರದ ಗ್ರಾಮಕ್ಕೆ ಭೇಟಿ ನೀಡಿ ಅವರನ್ನು ಅಭಿನಂದಿಸಿದ್ದಾರೆ ಎಂದು ಮಾದಮ್ಮ ಹೇಳಿದರು.