ಬೆಂಗಳೂರು (Bengaluru): ನಾಳೆ (ಆ.11) ರಕ್ಷಾ ಬಂಧನ. ಸಹೋದರತೆಯ ಸಂಕೇತವಾದ ರಕ್ಷಾ ಬಂಧನವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಿದ್ದಾರೆ. ಈ ಬಾರಿ ಹಬ್ಬದ ಸಂಭ್ರಮಕ್ಕೆ ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತಷ್ಟು ಮೆರಗು ನೀಡಲಿದ್ದಾರೆ.
ಅಪ್ಪು ಅವರು ನಮ್ಮನ್ನೆಲ್ಲ ಅಗಲಿದ್ದರೂ ಪ್ರತಿಯೊಬ್ಬರ ಮನದಲ್ಲೂ ಇನ್ನು ಜೀವಂತವಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ʻಅಪ್ಪು ರಾಖಿʼಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಅಪ್ಪು ಫೋಟೋ ಹಾಕಿ ರಾಖಿಗಳನ್ನು ತಯಾರಿಸಲಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಜನರು ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅಪ್ಪು ರಾಖಿಗೆ ಹೆಚ್ಚು ಬೇಡಿಕೆ ಇದೆ.
ಅಪ್ಪು ಅವರ ಮೇಲಿನ ಅಭಿಮಾನ ಎಂದಿಗೂ ಕಮ್ಮಿ ಆಗುವುದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಉದಾಹರಣೆಗಳು ಸಿಗುತ್ತಲೇ ಇವೆ. ಎಲ್ಲ ಕಡೆಗಳಲ್ಲೂ ಅಪ್ಪು ಗುಣಗಾನ ಮಾಡಲಾಗುತ್ತಿದೆ. ರಸ್ತೆಗಳಿಗೆ ಅವರ ಹೆಸರನ್ನು ಇಟ್ಟು ಗೌರವ ಸೂಚಿಸಲಾಗುತ್ತಿದೆ. ಪ್ರತಿಮೆಗಳನ್ನು ನಿರ್ಮಿಸಿ ಅಭಿಮಾನ ಮೆರೆಯಲಾಗುತ್ತಿದೆ. ಅಷ್ಟೇ ಅಲ್ಲದೇ, ಪ್ರತಿ ವಿಶೇಷ ಸಂದರ್ಭದಲ್ಲೂ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಈಗ ‘ರಕ್ಷಾ ಬಂಧನ’ ಹಬ್ಬದ ಸಂದರ್ಭದಲ್ಲೂ ಅದು ಮರುಕಳಿಸಿದೆ. ಮಾರುಕಟ್ಟೆಯಲ್ಲಿ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಫೋಟೋ ಇರುವ ‘ಅಪ್ಪು ರಾಖಿ’ ಲಭ್ಯವಾಗುತ್ತಿದೆ.
ಕೊಪ್ಪಳ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ಇರುವ ರಾಖಿಗಳನ್ನು ತಯಾರಿಸಲಾಗಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಜನರು ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ಪುನೀತ್ ಅವರಿಗೆ ನಾಡು-ನುಡಿಯ ಮೇಲೆ ಅಪಾರ ಗೌರವ ಇತ್ತು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ದೊಡ್ಡದು. ಇದೆಲ್ಲವನ್ನೂ ಪರಿಗಣಿಸಿ, ಮರಣೋತ್ತರವಾಗಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಲಾಯಿತು. ನವೆಂಬರ್ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುನೀತ್ ಅವರು ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿದ್ದರು. ಕರುನಾಡಿನ ಅರಣ್ಯ ಮತ್ತು ವನ್ಯ ಜೀವಿಗಳ ಮೇಲೆ ಚಿತ್ರಿತವಾಗಿರುವ ಈ ಡಾಕ್ಯುಮೆಂಟರಿ ಅಕ್ಟೋಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.