ಮನೆ ರಾಷ್ಟ್ರೀಯ ರಕ್ಷಾ ಬಂಧನ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ ಕೋರಿಕೆ

ರಕ್ಷಾ ಬಂಧನ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ ಕೋರಿಕೆ

0

ಬೆಂಗಳೂರು: ಇಂದು ಎಲ್ಲಡೆ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.

ಸಹೋದರ ಹಾಗೂ ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬದಂದು ದೇಶದ ಜನತೆಗೆ ಶುಭಾಶಯಗಳು. ಈ ಹಬ್ಬ ನಿಮ್ಮ ಸಂಬಂಧಗಳಲ್ಲಿ ಹೊಸ ಮಾಧುರ್ಯವನ್ನು ತರಲಿ. ನಿಮ್ಮ  ಜೀವನದಲ್ಲಿ ಸಂತೋಷ, ಸಮೃದ್ಧಿ ತುಂಬಿರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಹೋದರ ಸಹೋದರಿಯರ ನಡುವಿನ ಅವಿನಾಭಾವ ಪ್ರೀತಿ ಮತ್ತು ವಾತ್ಸಲ್ಯದ ಹಬ್ಬವಾದ ರಕ್ಷಾಬಂಧನದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ, ದೇಶದ ಜನತೆಗೆ ಶುಭ ಹಾರೈಸುತ್ತೇನೆ. ಸಹೋದರ ಸಹೋದರಿಯರ ನಡುವಿನ ಪ್ರೀತಿ ಮತ್ತು ಪರಸ್ಪರ ನಂಬಿಕೆಯ ಭಾವನೆಯನ್ನು ಆಧರಿಸಿದ ಈ ಹಬ್ಬವು ಎಲ್ಲಾ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಬಗ್ಗೆ ಪ್ರೀತಿ ಮತ್ತು ಗೌರವದ ಭಾವನೆಯನ್ನು ಹುಟ್ಟುಹಾಕುತ್ತದೆ. ನಮ್ಮ ಸಮಾಜದಲ್ಲಿನ ಮಹಿಳೆಯರ ಸುರಕ್ಷತೆ ಮತ್ತು ಗೌರವವನ್ನು ಕಾಪಾಡಲು ಈ ಹಬ್ಬದ ದಿನದಂದು, ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ನಾನು ಬಯಸುತ್ತೇನೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸೋದರತೆಯ ಸಂಕೇತವಾದ ರಕ್ಷಾಬಂಧನವು ದ್ವೇಷ, ವೈರುಧ್ಯಗಳನ್ನು ತೊಡೆದು ಪ್ರೀತಿ, ವಿಶ್ವಾಸದ ಬಂಧವು ನಮ್ಮೆಲ್ಲರನ್ನು ಬೆಸೆಯಲು ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ. ನಾಡಿನ ಜನತೆಗೆ ರಕ್ಷಾಬಂಧನದ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಶುಭಾಶಯಗಳು. ಭ್ರಾತೃತ್ವದ ಸಂಬಂಧವನ್ನು ಸಂಭ್ರಮಿಸುವ, ಬಾಂಧವ್ಯದ ಪ್ರತೀಕವಾದ ರಕ್ಷಾಬಂಧನ ಎಲ್ಲರ ಬದುಕಿನಲ್ಲಿ ಸಂತಸ ಮೂಡಿಸಲೆಂದು ಹಾರೈಸುತ್ತೇನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ ಹೇಳಿದ್ದಾರೆ.

ಮರಳಿನಲ್ಲಿ ಅರಳಿದ ರಾಖಿ ಕಲಾಕೃತಿ:

 ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಕಡಲತೀರದಲ್ಲಿ ಸುಂದರವಾದ ಮರಳು ಕಲಾಕೃತಿಯನ್ನು ರಚಿಸಿ ಶುಭಕೋರಿದ್ದಾರೆ.

ಶ್ರಾವಣ ಮಾಸದ ಕೊನೆಯ ಸೋಮವಾರದಂದೇ ರಕ್ಷಾ ಬಂಧನ ಹಬ್ಬ ಬಂದಿರುವುದರಿಂದ ಮರಳಿನ ರಾಖಿ ಹಾಗೂ ಶಿವನ ಕಲಾಕೃತಿ ರಚಿಸಿದ್ದಾರೆ. ಇಂದು ಶ್ರಾವಣ ಮಾಸದ ಕೊನೆಯ ಸೋಮವಾರ. ಭಗವಾನ್ ಶಿವ ಎಲ್ಲಾ ಸಹೋದರ ಸಹೋದರಿಯರನ್ನು ಆಶೀರ್ವದಿಸಲಿ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.