ಬೆಂಗಳೂರು: ರಾಮ್ ಚರಣ್ ತೇಜಾ ಮತ್ತು ಜೂ. ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ, ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಹೀಗಿರುವಾಗಲೇ ನಟ ರಾಮ್ ಚರಣ್ ತೇಜಾ ಕಪ್ಪು ಬಟ್ಟೆ ಧರಿಸಿ ಚಪ್ಪಲಿ, ಷೂ ಇಲ್ಲದೇ ಬರಿಗಾಲಿನಲ್ಲಿಯೇ ಚಿತ್ರ ಮಂದಿರಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ.
ನಿನ್ನೆ ಮುಂಬೈನ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿರುವ ರಾಮ್ ಚರಣ್ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದ್ದಾರೆ.
ಇದಕ್ಕೆಲ್ಲಾ ಕಾರಣ ರಾಮ್ ಚರಣ್ ಅಯ್ಯಪ್ಪ ಮಾಲೆ ಧಾರಣೆ ಮಾಡಿರುವುದು. ಇದರಿಂದಾಗಿ ಕಪ್ಪು ಬಟ್ಟೆಯನ್ನು ಧರಿಸಿ, ಬರಿಗಾಲಿನಲ್ಲಿಯೇ ಎಲ್ಲ ಕಡೆಗಳಲ್ಲಿಯೂ ರಾಮ್ ಚರಣ್ ಸಂಚಾರ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಮನ ಪಾತ್ರ ಮಾಡಿರುವ ಇವರು ಅಯ್ಯಪ್ಪನ ಭಕ್ತರಾಗಿದ್ದು, ಈ ಹಿಂದೆಯೂ ಹಲವು ಬಾರಿ ಶಬರಿಮಲೆ ಯಾತ್ರೆ ಕೈಗೊಂಡಿದ್ದರು.

ಸೆಟ್ ಬಾಯ್ಗಳಿಗೆ ಚಿನ್ನದುಡುಗೊರೆ: ಆರ್ ಆರ್ ಆರ್ ಸಿನಿಮಾ ಯಶಸ್ಸು ಕಾಣುತ್ತಿದೆ. ಇದರ ನಡುವಲ್ಲೇ ರಾಮ್ ಚರಣ್ ಚಿತ್ರಕ್ಕಾಗಿ ಸೆಟ್‌ನಲ್ಲಿ ಕೆಲಸ ಮಾಡಿದ ಎಲ್ಲರಿಗೂ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ. ಒಂದು ಕಡೆಯಲ್ಲಿ ಆರ್‌ಆರ್‌ಆರ್ ಎಂದೂ ಮತ್ತೊಂದು ಕಡೆ ರಾಮ್ ಚರಣ್ ಎಂದೂ ಬರೆದಿರುವ ಚಿನ್ನದ ನಾಣ್ಯಗಳು 10 ಗ್ರಾಂ ತೂಕ ಇದ್ದು, ಇದಕ್ಕಾಗಿ ರಾಮ್ ಚರಣ್ ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ.














