ಮನೆ ರಾಜಕೀಯ ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ: ‌ಎಚ್.ಡಿ. ಕುಮಾರಸ್ವಾಮಿ

ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ: ‌ಎಚ್.ಡಿ. ಕುಮಾರಸ್ವಾಮಿ

0

ಚಿಕ್ಕಮಗಳೂರು: ರಾಮಮಂದಿರ ಆಗಬೇಕು ಎನ್ನುವುದು ದೇಶದ ಜನರ ನಿರೀಕ್ಷೆ, ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ರಾಮಮಂದಿರ ಉದ್ಘಾಟನೆ ಭಾರತದ ಹಬ್ಬವಾಗಿದ್ದು, ರಾಮಮಂದಿರ ನಿಜವಾದ ರಾಮರಾಜ್ಯದ ಕನಸು  ಎಂದು‌ ಮಾಜಿ ಮುಖ್ಯಮಂತ್ರಿ ‌ಎಚ್.ಡಿ. ಕುಮಾರಸ್ವಾಮಿ‌ ಹೇಳಿದರು.

ಚಿಕ್ಕಮಗಳೂರಿನಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿರುವ ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು.

ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆ‌ ಚುನಾವಣೆ ಸ್ಪರ್ಧೆಗೆ ಕಾರ್ಯಕರ್ತರ ಒತ್ತಾಯ ಕುರಿತು ಮಾತನಾಡಿ, ಕಳೆದ ಚುನಾವಣೆ ಬೇರೆ, ಈ ಬಾರಿ ಚುನಾವಣೆ ಬೇರೆ. ಇವತ್ತು ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ‌ ಗೆಲ್ಲುವ ವಾತಾವರಣವಿದೆ. ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಜೆಡಿಎಸ್ ಬಿಟ್ಟು 2-3 ಪರ್ಸೆಂಟ್ ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲ. ಓರ್ವ ಸಾಮಾನ್ಯ ಕಾರ್ಯಕರ್ತ ಕೂಡ ಇಂದು ಗೆಲ್ಲುತ್ತಾನೆ ಎಂದರು.

ಹೊಂದಾಣಿಕೆ ಆಗಿರುವುದರಿಂದ ಯಾರು ಎಲ್ಲಿ ಸ್ಪರ್ಧಿಸಬೇಕೆಂದು ತೀರ್ಮಾನ ಆಗಿಲ್ಲ, ಹೊಂದಾಣಿಕೆ ಮಾತುಕತೆ ಬಳಿಕ ಎಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ. ತೀರ್ಮಾನದ ಬಳಿಕ ಎಲ್ಲಾ ಸರಿಯಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಮೂರು ಡಿಸಿಎಂ ಚರ್ಚೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಜಾತಿಗೊಂದು ಡಿಸಿಎಂ ಸ್ಥಾನ ನೀಡಬೇಡಿ, 30-40 ಜನಕ್ಕೆ ಡಿಸಿಎಂ ಕೊಡುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ಹೀಗೆ ಮಾಡಿದರೆ ಪ್ರತಿನಿತ್ಯ ಈ ರೀತಿ ಗೊಂದಲ ಇರುವುದಿಲ್ಲ. ಈಗ ಗ್ಯಾರೆಂಟಿ ನೋಡಿಕೊಳ್ಳಲು ಓರ್ವ ಅಧ್ಯಕ್ಷ ಅದಕ್ಕೆ ವಾರ್ಷಿಕ 16 ಕೋಟಿ ಖರ್ಚಂತೆ? ಐವರು ಉಪಾಧ್ಯಕ್ಷರಂತೆ, ಯಾವುದಕ್ಕೆ? ಯಾರದ್ದೋ ದುಡ್ಡಲ್ಲಿ ಎಲ್ಲಮನ ಜಾತ್ರೆ ಮಾಡಬೇಕು ಎಂದು ತೀವ್ರವಾಗಿ ಟೀಕಿಸಿದ ಅವರು ಕಾಂಗ್ರೆಸ್ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದರು.

ಎರಡು ದಿನಗಳ ರಾಜಕೀಯ ಚರ್ಚೆ ಕುರಿತು ಮಾತನಾಡಿ, ಮಂಡ್ಯ ಮಾತ್ರವಲ್ಲ ರಾಜ್ಯ ರಾಜಕೀಯ ಹಾಗೂ ಎಲ್ಲಾ ಜಿಲ್ಲೆಗಳ ರಾಜಕೀಯ ಬಗ್ಗೆ ಚರ್ಚೆ ಮಾಡಲಾಗಿದೆ. ಎರಡು ರಾಜಕೀಯ ಪಕ್ಷಗಳ ಬಿರುಸಿನ‌ ರಾಜಕೀಯ ಬೆಂಗಳೂರಿನಿಂದ ದೆಹಲಿ ತಲುಪಿದೆ. ನಮ್ಮ ಪಕ್ಷದ ಚಟುವಟಿಕೆ ಎರಡು ಪಕ್ಷ ಗಳಿಗೆ ಹೋಲಿಸಿದರೆ ನಮ್ಮದು ದೊಡ್ಡ ಮಟ್ಟದ ಇನ್ವಾಲ್ಮೆಂಟ್ ಇದೆ. ಮೈತ್ರಿಯಲ್ಲಿ ನಮ್ಮದು ಎಷ್ಟು ಸ್ಥಾನ, ನಮ್ಮ ಅಭ್ಯರ್ಥಿಗಳ ವಿಶ್ವಾಸ ಅವರು ಹೇಗೆ ಪಡೆಯಬೇಕು ಹಾಗೂ ನಾವು ಅವರ ವಿಶ್ವಾಸ ಹೇಗೆ ಪಡೆಯಬೇಕು ಎಂಬ ಎಲ್ಲಾ ಚರ್ಚೆ ಆಗಿದೆ. ಮಂಡ್ಯ, ಮೈಸೂರು, ಹಾಸನ ಚರ್ಚೆಯಾಗಿದೆ. ಮೈತ್ರಿಗೆ ಇಮೇಜ್ ಇದೆ. ಮೋದಿಗೆ ಇಮೇಜ್ ಇದೆ. ರಾಮಮಂದಿರ ಉದ್ಘಾಟನೆ ಮುಂಚೂಣಿಯಲ್ಲಿದೆ. ದೇಶದ ಜನರಿಗೆ ಸ್ಥಿರ ಸರ್ಕಾರ ಬೇಕಿದೆ. ಎರಡು ಪಕ್ಷಕ್ಕೂ ನಮ್ಮ ಶಕ್ತಿ ಏನೆಂದು ಗೊತ್ತಿದೆ ಎಂದರು.