ಮನೆ ರಾಜ್ಯ “ರಾಮನಗರ ಮರು ನಾಮಕರಣ ರಿಯಲ್ ಎಸ್ಟೇಟ್ ಕರಪತ್ರದಂತೆ”: ನಿಖಿಲ್ ಕುಮಾರಸ್ವಾಮಿ ತೀವ್ರ ವಿರೋಧ

“ರಾಮನಗರ ಮರು ನಾಮಕರಣ ರಿಯಲ್ ಎಸ್ಟೇಟ್ ಕರಪತ್ರದಂತೆ”: ನಿಖಿಲ್ ಕುಮಾರಸ್ವಾಮಿ ತೀವ್ರ ವಿರೋಧ

0

ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು “ಬೆಂಗಳೂರು ದಕ್ಷಿಣ”ಎಂದು ಮರು ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರು ಈ ನಿರ್ಧಾರವನ್ನು ಟೀಕಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಈ ಕುರಿತು ಸರಳವಾಗಿ ಮಾತ್ರವಲ್ಲ, ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯಿಸಿ, “ಇದು ಸರ್ಕಾರದ ಜನಪರ ನೀತಿಯಲ್ಲ, ರಿಯಲ್ ಎಸ್ಟೇಟ್ ಯೋಜನೆಯ ಕರಪತ್ರದಂತೆ ನಾಮ ಬದಲಾವಣೆ ಮಾಡಲಾಗಿದೆ” ಎಂದು ಗುಡುಗಿದ್ದಾರೆ. ಸರ್ಕಾರದ ಈ ಕ್ರಮವು ಜಿಲ್ಲೆಯ ಸಾಂಸ್ಕೃತಿಕ, ಭೌಗೋಳಿಕ ಹಾಗೂ ಐತಿಹಾಸಿಕ ಹಿನ್ನೆಲೆಗೆ ಧಕ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಊರ ಹೆಸರು ಮರುನಾಮಕರಣವು ಬೆಳವಣಿಗೆಗೆ ಮಾಂತ್ರಿಕ ದಂಡವಾಗಿದ್ದರೆ, ಕನಕಪುರವನ್ನು ಕೌಲಲಾಂಪುರ್ ಎಂದು ಮರುನಾಮಕರಣ ಮಾಡಿ ಈಗ ಅಂತರರಾಷ್ಟ್ರೀಯ ನಗರವಾಗಿ ಪರಿವರ್ತಿಸಬಹುದಿತ್ತು. ನಿಮ್ಮ ಹೊಸ ನಾಮಕರಣದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ 2 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಮನಗರದಲ್ಲಿ ಒಂದೇ ಒಂದು ಅಭಿವೃದ್ಧಿ ಯೋಜನೆಯೂ ಆರಂಭಗೊಂಡಿಲ್ಲ. ಮಾನ್ಯ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಡಿ.ಕೆ. ಸಿಎಂ ಕುಮಾರ್ ಎಂದು ಮರುನಾಮಕರಣ ಮಾಡಬಹುದು. ಏಕೆಂದರೆ ನಾಯಕತ್ವ ಇಲ್ಲದಿದ್ದಾಗ, ಬ್ರ‍್ಯಾಂಡಿಂಗ್ ಮಾತ್ರ ಪ್ರಣಾಳಿಕೆಯಾಗುತ್ತದೆ ಎಂದು ಟೀಕಿಸಿದ್ದಾರೆ.