ಮನೆ ದೇವಸ್ಥಾನ ಶ್ರೀರಾಮನ ಪಾದಸ್ಪರ್ಶದಿಂದ ಪುನೀತವಾದ ರಾಮನಾಥಪುರ

ಶ್ರೀರಾಮನ ಪಾದಸ್ಪರ್ಶದಿಂದ ಪುನೀತವಾದ ರಾಮನಾಥಪುರ

0

ಕಲೆಗಳ ತವರೆಂದೇ ಖ್ಯಾತವಾದ ಹಾಸನ ಜಿಲ್ಲೆಗೆ ಬೇಲೂರು, ಹಳೇಬೀಡು ಕಳಶಪ್ರಾಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಾಸನ ಜಿಲ್ಲೆಯಲ್ಲಿ ಬೇಲೂರು ಹಳೇಬೀಡಿನಷ್ಟೇ ಕಲಾವೈಭವದ ಹಲವಾರು ದೇವಾಲಯಗಳಿವೆ. ಈ ಪೈಕಿ ಹಲವು ದೇವಾಲಯಗಳು ಹೆಚ್ಚು ಜನಪ್ರಿಯವಾಗಿಲ್ಲ. ಇಂಥ ಕಲಾಶ್ರೀಮಂತಿಕೆಯ ದೇವಾಲಯಗಳಿಂದ ಕೂಡಿದ ಮತ್ತೊಂದು ಕ್ಷೇತ್ರ ಅರಕಲಗೂಡು ತಾಲೂಕಿನ ರಾಮನಾಥಪುರ.

ಅರಕಲಗೂಡಿನಿಂದ ದಕ್ಷಿಣಕ್ಕೆ 10 ಕಿಲೋ ಮೀಟರ್ ದೂರದಲ್ಲಿ ಕಾವೇರಿ ಎಡದಂಡೆಯಲ್ಲಿರುವ ಈ ಕ್ಷೇತ್ರದಲ್ಲಿ ಪ್ರಸನ್ನ ರಾಮೇಶ್ವರ, ಸುಬ್ರಮಣ್ಯೇಶ್ವರ, ಪಟ್ಟಾಭಿರಾಮ, ಅಗಸ್ತ್ಯೇಶ್ವರ, ಆಂಜನೇಯ, ಲಕ್ಷ್ಮೀನರಸಿಂಹ ಮತ್ತು ದುರ್ಗಾರಾಮೇಶ್ವರಿ ಎಂಬ ಏಳು ಭವ್ಯ ದೇವಾಲಯಗಳಿವೆ.

ಹರಿಹರ ಕ್ಷೇತ್ರವೆಂದೂ ದಕ್ಷಿಣ ಕಾಶಿಯೆಂದೂ  ಹೆಸರಾದ ಕ್ಷೇತ್ರಕ್ಕೆ ಆಚಾರ್ಯತ್ರಯರ ಪೈಕಿ  ಆದಿಶಂಕರರು ಹಾಗೂ ರಾಮಾನುಜಾಚಾರ್ಯರು ಭೇಟಿ ನೀಡಿದ್ದರೆನ್ನುತ್ತದೆ ಇತಿಹಾಸ.

ಇಲ್ಲಿರುವ ಪ್ರಸನ್ನ ರಾಮೇಶ್ವರ ದೇವಾಲಯ ಕಲಾಶ್ರೀಮಂತಿಕೆಯಿಂದ ಕೂಡಿದೆ.  ಹೊಯ್ಸಳರ ಕಾಲದ ಈ ದೇವಾಲಯ, ವಿಜಯನಗರದ ಅರಸರ ಕಾಲದಲ್ಲಿ ವಿಸ್ತರಿಸಲ್ಪಟ್ಟು ಜೀರ್ಣೋದ್ಧಾರವಾಗಿದೆ. ಪ್ರಸನ್ನ ರಾಮೇಶ್ವರ ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗದಲ್ಲಿ ಪೂಜಿತನಾಗಿದ್ದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ ಎನ್ನುತ್ತಾರೆ ದೇವಾಲಯದ ಅರ್ಚಕರು.

ಈ ಕ್ಷೇತ್ರದಲ್ಲಿ ಕೃತಯುಗದಲ್ಲಿ ಸಂವರ್ತಿಕೇಶ್ವರ ನೆಲೆಸಿದ್ದ ಕಾರಣ, ಈ ಊರಿಗೆ ಸಂವರ್ತಕಪುರಿ ಎಂಬ ಹೆಸರು ಇತ್ತಂತೆ, ನಂತರ ಈ ಊರು ವಹ್ನಿಕಾಪುರ ಎಂದು ಕರೆಸಿಕೊಂಡಿತಂತೆ. ಅದಕ್ಕೂ ಒಂದು ಕತೆ ಇದೆ. ಕಾಲು ಸಹಿತ ಮೂರು ಲೋಕಗಳಿಗೂ ಹೋಗಿ ಬಂದ, ಭೃಗು ಮುನಿಗಳಿಂದ ಶಾಪಕ್ಕೆ ತುತ್ತಾದ  ಅಗ್ನಿ ದೇವನಿಗೆ ಇಲ್ಲಿ ಶಾಪವಿಮೋಚನೆ ಆಯಿತೆಂದೂ ಹೇಳಲಾಗುತ್ತದೆ.  ಅದರ ನೆನಪಿಗಾಗಿ ಇಲ್ಲೊಂದು ಪುಷ್ಕರಣಿ ಇದ್ದು, ಇದನ್ನು ವಹ್ನಿ ಪುಷ್ಕರಿಣಿ ಎಂದು ಕರೆಯುತ್ತಾರೆ. ಈ ಊರಿಗೆ ವಹ್ನಿಕಾಪುರ ಎಂದು ಹೆಸರು ಬರಲು ಇದುವೇ ಕಾರಣ ಎನ್ನಲಾಗಿದೆ. ತ್ರೇತಾಯುಗದಲ್ಲಿ ಈ ಕ್ಷೇತ್ರದಲ್ಲಿ ವಾಸುಕೇಶ್ವರ ನೆಲೆಸಿದ್ದನಂತೆ. ಈ  ಕಲಿಯುಗದಲ್ಲಿ ಪ್ರಸನ್ನ ರಾಮೇಶ್ವರ ನೆಲೆಸಿರುವ ಕಾರಣ ಊರು ರಾಮನಾಥಪುರವಾಗಿದೆಯಂತೆ. 

ರಾಮಾಯಣಕ್ಕೂ ರಾಮನಾಥಪುರಕ್ಕೂ ನಂಟಿದೆ. ಶ್ರೀರಾಮಚಂದ್ರ  ರಾವಣ ಸಂಹಾರದ ಬಳಿಕ ಬ್ರಹ್ಮ ಹತ್ಯಾದೋಷದ ನಿವಾರಣೆಗಾಗಿ, ಇಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪೂಜಿಸಿದ ಎಂದು ಕೆಲವರು ಹೇಳಿದರೆ, ಇಲ್ಲ ತ್ರೇತಾಯುಗದ ಯುಗಪುರುಷ ಶ್ರೀರಾಮ ವನವಾಸಿಯಾದ ಕಾಲದಲ್ಲಿ ಇಲ್ಲಿಗೆ ಬಂದಿದ್ದಾಗ ಈ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ ಎಂದೂ ವಾದಿಸುತ್ತಾರೆ. ಒಟ್ಟಾರೆ ರಾಮ ಸ್ಥಾಪಿಸಿ ಪೂಜಿಸಿದ ಈ ಲಿಂಗ ರಾಮೇಶ್ವರ ಎಂದು ಖ್ಯಾತವಾಗಿದೆ. ಶ್ರೀರಾಮ ಪಾದಸ್ಪರ್ಶದಿಂದ ಪುನೀತವಾದ ಊರು  ರಾಮನಾಥಪುರವಾಗಿದೆ ಎಂದು ಊರ ಹಿರಿಯರು ಹೇಳುತ್ತಾರೆ.

ಪುರಾತನವಾದ ಪ್ರಸನ್ನ ರಾಮೇಶ್ವರ ದೇವಾಲಯ ನಕ್ಷತ್ರಾಕಾರದ ಜಗಲಿಯ ಮೇಲೆ ಇತ್ತೆಂದು ಹೇಳುತ್ತಾರಾದರೂ ಈಗ ಜಗಲಿ ಇಲ್ಲಿ ಕಾಣುವುದಿಲ್ಲ. ಕಲ್ಲಿನ ಗೋಡೆಗಳ ಮೇಲೆ ಸೂಕ್ಷ್ಮವಾದ ಕೆತ್ತನೆಗಳಿಲ್ಲ. ಆದರೆ ಗೋಪುರ ಆಕರ್ಷಕರವಾಗಿದೆ. ದೇವಾಲಯಕ್ಕೆ ಭವ್ಯವಾದ ರಾಜಗೋಪುರವಿದೆ.  ಇದು ವಿಜಯನಗರ ಶೈಲಿಯಲ್ಲಿದೆ.  ಗರ್ಭಗೃಹದ ಮೇಲಿನ ಗೋಪುರದಲ್ಲಿ ಹೊಯ್ಸಳ ಲಾಂಛನವಿದೆ. ದೇವಾಲಯಕ್ಕೆ ವಿಶಾಲವಾದ ಪ್ರದಕ್ಷಿಣ ಪ್ರಾಂಗಣವಿದೆ. ಪರಿವಾರ ದೇವತೆಗಳ ಪುಟ್ಟ ಗುಡಿಗಳೂ ಇವೆ. ದೇಗುಲದ ಪ್ರಾಕಾರದಲ್ಲಿ 36 ಶಿವಲಿಂಗವಿದೆ. ಇದನ್ನು ಮೂರು ಸುತ್ತು ಹಾಕಿದರೆ 108 ಶಿವಲಿಂಗ ದರ್ಶನದ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಪ್ರಾಕಾರದಲ್ಲಿರುವ ಕೆಲವು ಕಂಬಗಳಲ್ಲಿ ಗಣಪತಿ ಸೇರಿದಂತೆ ದೇವಾನು ದೇವತೆಗಳ ಉಬ್ಬುಶಿಲ್ಪಗಳಿವೆ.  ದೇವಾಲಯದಲ್ಲಿ ಎರಡು ಹೊಕ್ಕಳಿನ ಗಣಪನ ಮೂರ್ತಿಯಿರುವುದು ವಿಶೇಷ. ಪ್ರಾಂಗಣದಲ್ಲಿ ಶ್ರೀಚಕ್ರ ಸಮೇತವಾದ ಇಂದ್ರಾಕ್ಷಿಯ ಗುಡಿಯೂ ಇದೆ. ದೇವಾಲಯದ ಒಳಗೆ ಪ್ರಧಾನ ಗರ್ಭಗೃಹದಲ್ಲಿ ಸುಂದರವಾದ ರಾಮೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಹನುಮಂತ ಪ್ರತಿಷ್ಠಾಪನೆ ಮಾಡಿರುವ ಹನುಮಂತೇಶ್ವರ ಲಿಂಗವೂ ಇದೆ.

ಊರಿನಲ್ಲಿರುವ ಪಟ್ಟಾಭಿರಾಮಚಂದ್ರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಗರ್ಭಗೃಹದಲ್ಲಿ ಕುಳಿತಿರುವ ಶ್ರೀರಾಮಚಂದ್ರನ ತೊಡೆಯ ಮೇಲೆ ಸೀತಾ ಮಾತೆ ಇರುವುದು ವೈಶಿಷ್ಟ್ಯ. ಇಲ್ಲಿರುವ ಮೂಲ ವಿಗ್ರಹವನ್ನು ಸೌಭರಿ ಮುನಿಗಳು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ. ಪ್ರತಿವರ್ಷ ವೈಶಾಖ ಶುಕ್ಲದಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ.

ಪಟ್ಟಾಭಿರಾಮ ದೇವಾಲಯದ ಎದುರು ಲಕ್ಷ್ಮೀನರಸಿಂಹ ದೇವಾಲಯವಿದೆ. ಇದನ್ನು ಚಿಕ್ಕದೇವರಾಜ ಒಡೆಯರು ಕಟ್ಟಿಸಿದ ಬಗ್ಗೆ ದಾಖಲೆಗಳಿವೆ.

ಇಲ್ಲಿರುವ ಇನ್ನೊಂದು ಪ್ರಮುಖ   ದೇವಾಲಯದ ದುರ್ಗಾರಾಮೇಶ್ವರಿಯದು. ಈ ದೇವಿ ವಿಗ್ರಹವನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂದು ಪ್ರತೀತಿ. ಅಗಸ್ತ್ಯ ಮಹಾ ಮುನಿಗಳಿಂದ ಸ್ಥಾಪಿಸಿದ ಅಗಸ್ತೇಶ್ವರ ದೇವಾಲಯ ರಮಣೀಯವಾಗಿದೆ. ದ್ರಾವಿಡ ಶೈಲಿಯ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಏಳು ಹೆಡೆಗಳುಳ್ಳ ಸುಂದರ ನಾಗವಿಗ್ರಹವಿದೆ. ಮಾರ್ಗಶಿರ ಶುದ್ಧ ಷಷ್ಠಿಯಂದು ರಾಮನಾಥಪುರದಲ್ಲಿ ದನಗಳ ಜಾತ್ರೆ ನಡೆಯುತ್ತದೆ.

ರಾಕ್ಷಸರ ಗುರು ಶುಕ್ರಾಚಾರ್ಯರು ಸತ್ತವರನ್ನು ಬದುಕಿಸುವ ಸಂಜೀವಿನಿ ಮಂತ್ರದ ಸಿದ್ಧಿಗಾಗಿ ಇಲ್ಲಿ ತಪಸ್ಸನ್ನು ಆಚರಿಸಿದರೆಂದೂ ಹೇಳಲಾಗುತ್ತದೆ. ಗೋಗರ್ಭ, ಊರ್ವಶಿಶಿಲೆಗಳೂ ಇಲ್ಲಿವೆ. ಕಾವೇರಿ ನದಿಯ ನಡುವೆ ಗಾಯತ್ರಿಶಿಲೆ ಇದೆ.  ಇಲ್ಲಿ ಒಂದು ಗಾಯತ್ರಿ ಮಂತ್ರ ಜಪ ಮಾಡಿದರೆ, ಹನ್ನೆರೆಡು ಸಾವಿರ ಗಾಯತ್ರಿ ಜಪ ಮಾಡಿದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. ವೇದಾಧ್ಯಯನ ಮಾಡುವವರು ಈ ಕ್ಷೇತ್ರಕ್ಕೆ ಬರುತ್ತಾರೆ.  ನದಿಯಲ್ಲಿ ಶೃಂಗೇರಿಯಲ್ಲಿರುವಂತೆಯೇ ದೊಡ್ಡ ದೊಡ್ಡ ಮೀನುಗಳೂ ಇವೆ.