ಬೆಂಗಳೂರು: ಬಾಂಬ್ ಸ್ಫೋಟ ಸಂಭವಿಸಿದ್ದ ಬೆಂಗಳೂರಿನ ಐಟಿಪಿಎಲ್ ರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಎನ್ಐಎ ಸ್ಥಳ ಮಹಜರು ನಡೆಸಿದೆ.
ಬಂಧಿತ ಉಗ್ರ ಮುಸಾವಿರ್ ಹುಸೇನ್ ಶಾಜೀಬ್’ನನ್ನು ಇಂದು ಕೆಫೆ ಬಳಿ ಕರೆತಂದು ಎನ್ಐಎ ಅಧಿಕಾರಿಗಳು ಆರೋಪಿಯ ಕೃತ್ಯದ ಮರುಸೃಷ್ಟಿ ಮಾಡಿಸಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಕೆಫೆ ಸುತ್ತಮುತ್ತ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮಾರ್ಚ್ 1ರಂದು ಬೆಂಗಳೂರಿನ ಐಟಿಪಿಎಲ್ ರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರ ಸಹಿತ ಒಟ್ಟು 9 ಜನ ಗಾಯಗೊಂಡಿದ್ದರು. ಬಳಿಕ ಮಾರ್ಚ್ 3ರಂದು ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ ತನಿಖೆ ವೇಳೆ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜೀಬ್ ಈ ಪ್ರಕರಣದ ಮಾಸ್ಟರ್ ಮೈಂಡ್ ಗಳೆಂದು ಪತ್ತೆಯಾಗಿತ್ತು.
ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಅಡಗಿದ್ದ ಇಬ್ಬರೂ ಆರೋಪಿಗಳನ್ನು ಏಪ್ರಿಲ್ 12 ರಂದು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.