ಮನೆ ರಾಷ್ಟ್ರೀಯ ರಾಮಲಲ್ಲಾ ಇನ್ಮುಂದೆ ಟೆಂಟ್ ​​ನಲ್ಲಿರಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ: ಪ್ರಧಾನಿ ಮೋದಿ

ರಾಮಲಲ್ಲಾ ಇನ್ಮುಂದೆ ಟೆಂಟ್ ​​ನಲ್ಲಿರಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ: ಪ್ರಧಾನಿ ಮೋದಿ

0

ಅಯೋಧ್ಯೆ: ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್ ​​ನಲ್ಲಿ ಇರಲ್ಲ . ನಮ್ಮ ರಾಮಲಲ್ಲಾ ದಿವ್ಯ ಮಂದಿರದಲ್ಲಿ ಇರುತ್ತಾನೆ. ಈ ಕ್ಷಣ ಅತ್ಯಂತ ಪವಿತ್ರವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ನಂತರ ದೇವಾಲಯದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ, ಇಂದು ನಮ್ಮೆಲ್ಲರ ರಾಮ ಬಂದಿದ್ದಾನೆ. ವರ್ಷಗಳ ಹೋರಾಟದ ಬಳಿಕ ರಾಮ ಬಂದಿದ್ದಾನೆ.ಈ ಶುಭ ಘಳಿಗೆಯಲ್ಲಿ ಎಲ್ಲರಿಗೂ ಶುಭಾಶಯ ಎಂದಿದ್ದಾರೆ.

2024 ರ ಜನವರಿ 22 ಇದು ಕೇವಲ ದಿನಾಂಕ ಅಲ್ಲ, ಹೊಸ ಕಾಲಚಕ್ರದ ಉದಯ. ಗುಲಾಮಿ ಮನಸ್ಥಿತಿಯನ್ನು ಎದುರಿಸಿ ನಮ್ಮ ರಾಷ್ಟ್ರ ಎದ್ದು ನಿಂತ ಕ್ಷಣವಿದು ಎಂದು ಮೋದಿ ಹೇಳಿದ್ದಾರೆ.

ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ದೇಶದಲ್ಲಿ ಇಂದು ಪ್ರತಿದಿನವೂ ಒಂದು ವಿಶ್ವಾಸ ಮೂಡುತ್ತಿದೆ. ಈ ಕ್ಷಣ ದೈವಿಕ ಅನುಭವವನ್ನು ಪಡೆಯುತ್ತಿದ್ದೇನೆ. ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಇಷ್ಟು ವರ್ಷಗಳ ಕಾಲ ನಾವು ಸಮಯ ತೆಗೆದುಕೊಂಡಿದ್ದಕ್ಕೆ ಕ್ಷಮೆಯಾಚಿಸುವೆ. ಪ್ರಭು ಶ್ರೀರಾಮನ ಆಗಮನದಿಂದ ಇಡೀ ದೇಶ ಸಂಭ್ರಮಗೊಂಡಿದೆ ಎಂದಿದ್ದಾರೆ ಮೋದಿ.

ಪ್ರಭು ಶ್ರೀರಾಮನ ಅಸ್ತಿತ್ವಕ್ಕಾಗಿ ನಮ್ಮ ದೇಶದಲ್ಲಿ ಕಾನೂನು ಸಂಘರ್ಷ ಕೂಡ ನಡೆದಿದೆ. ಭಾರತದ ನ್ಯಾಯದೇವತೆ ಆದೇಶದಂತೆ ನ್ಯಾಯಬದ್ಧವಾಗಿ ಮಂದಿರ ನಿರ್ಮಾಣವಾಗಿದೆ. ಇಂದು ಇಡೀ ದೇಶ ಇಂದು ರಾಮ ದೀಪಾವಳಿ ಆಚರಿಸುತ್ತಿದೆ. ದೇಶದ ಪ್ರತಿ ಮನೆಯಲ್ಲೂ ಇಂದು ಸಂಜೆ ಶ್ರೀರಾಮನ ಜ್ಯೋತಿ ಬೆಳಗಲಿದೆ. ಕಾಲಚಕ್ರ ಮತ್ತೆ ಬದಲಾವಣೆಯಾಗಿದೆ. ನನ್ನ 11 ದಿನಗಳ ಉಪವಾಸ ವ್ರತ ಶ್ರೀರಾಮನ ಮಂದಿರದಲ್ಲಿ ಅಂತ್ಯಗೊಳಿಸಿದ್ದೇನೆ. ಸಮುದ್ರದಿಂದ ಸರಯೂವರೆಗೆ ಯಾತ್ರೆಯ ಅವಕಾಶ ಸಿಕ್ಕಿದೆ. ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ ಎಂದು ಮೋದಿ ಹೇಳಿದರು.

ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ನಾವು ಜೀವಂತವಾಗಿರುವುದೇ ಒಂದು ಸೌಭಾಗ್ಯ ಎಂದರು. ಸಾವಿರಾರು ವರ್ಷಗಳ ನಂತರವೂ ಜನರು ಈ ದಿನಾಂಕ, ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ಇದನ್ನು ನಾವು ನೋಡುತ್ತಿರುವುದು ರಾಮನ ಪರಮ ಆಶೀರ್ವಾದ” ಎಂದು ಮೋದಿ ಹೇಳಿದ್ದಾರೆ. ಪ್ರಭು ಶ್ರೀರಾಮನಲ್ಲಿ ಕ್ಷಮೆ ಕೋರಿದ ಪ್ರಧಾನಿ ಏನಾದರೂ ಲೋಪ ಸಂಭವಿಸಿದ್ದರಿಂದಲೇ ಈ ಹಂತವನ್ನು ತಲುಪಲು ತುಂಬಾ ಸಮಯ ತೆಗೆದುಕೊಂಡಿದ್ದಿರಬಹುದು  ಎಂದು ಹೇಳಿದರು.