ಇಂದು ವಿಶ್ವದಾದ್ಯಂತ ಈದ್-ಉಲ್-ಫಿತರ್ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ , ರಾಷ್ಟ್ರಪತಿ ದ್ರೌಪದಿ ಮುರ್ಮು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿಶ್ವದಾದ್ಯಂತದ ನಾಯಕರು ಶುಭಾಶಯ ಕೋರಿದ್ದಾರೆ.
ಈದ್-ಉಲ್-ಫಿತರ್ ಶುಭಾಶಯಗಳು. ನಮ್ಮ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವ ಹೆಚ್ಚಲಿ. ಪ್ರತಿಯೊಬ್ಬರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಈದ್ ಮುಬಾರಕ್ ಎಂದು ಪ್ರಧಾನ ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಈದ್-ಉಲ್-ಫಿತರ್ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ ವಿಶೇಷವಾಗಿ ನಮ್ಮ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರೀತಿ ಮತ್ತು ದಯೆಯ ಹಬ್ಬವಾಗಿರುವ ಈದ್ ನಮಗೆ ಇತರರಿಗೆ ಸಹಾಯ ಮಾಡುವ ಸಂದೇಶವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ನಾವು ಒಟ್ಟಾಗಿ ಮುನ್ನಡೆಯುವ ಸಂಕಲ್ಪವನ್ನು ತೆಗೆದುಕೊಳ್ಳೋಣ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.
ಎಲ್ಲರಿಗೂ ಈದ್ ಮುಬಾರಕ್! ಈ ಪವಿತ್ರ ಹಬ್ಬವು ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ರಿಟನ್ ಮತ್ತು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯಗಳಿಗೆ ಈದ್ ಮುಬಾರಕ್!” ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ರಂಜಾನ್ ತಿಂಗಳು ಮುಕ್ತಾಯವಾಗುತ್ತಿದ್ದಂತೆ, ಜಿಲ್ ಮತ್ತು ನಾನು ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರಪಂಚದಾದ್ಯಂತ ಈದ್ ಅಲ್-ಫಿತರ್ ಆಚರಿಸುವ ಮುಸ್ಲಿಮರಿಗೆ ನಮ್ಮ ಆತ್ಮೀಯ ಶುಭಾಶಯಗಳನ್ನು ಕೋರುತ್ತಿದ್ದೇವೆ. ಸಹಾನುಭೂತಿಯಿಂದ ತುಂಬಿದ ಸಂತೋಷದಾಯಕ ರಜಾದಿನವನ್ನು ನಾವು ಬಯಸುತ್ತೇವೆ. ಈದ್ ಮುಬಾರಕ್ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.