ಮನೆ ಕ್ರೀಡೆ ಮುಂಬೈ-ಮಧ್ಯ ಪ್ರದೇಶ ತಂಡಗಳ ನಡುವೆ ರಣಜಿ ಫೈನಲ್ ಪಂದ್ಯ

ಮುಂಬೈ-ಮಧ್ಯ ಪ್ರದೇಶ ತಂಡಗಳ ನಡುವೆ ರಣಜಿ ಫೈನಲ್ ಪಂದ್ಯ

0

ಬೆಂಗಳೂರು(Bengaluru): ಮಧ್ಯಪ್ರದೇಶ ಮತ್ತು ಮುಂಬೈ ತಂಡಗಳು ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿರುವ 2021-22ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ಪೃಥ್ವಿ ಶಾ ನೇತೃತ್ವದ ಮುಂಬೈ ತಂಡ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. 41 ಬಾರಿ ಚಾಂಪಿಯನ್‌ ಆಗಿರುವ ಮುಂಬೈ ತಂಡ ರಣಜಿ ಟ್ರೋಫಿ ಇತಿಹಾಸದ ಅತ್ಯಂತ ಯಶಸ್ವಿ ತಂಡವಾಗಿದೆ. ಆದರೂ ಮಧ್ಯ ಪ್ರದೇಶ ತಂಡ  ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಾಲ್ ತಂಡವನ್ನು 174 ರನ್‌ಗಳಿಂದ ಸೋಲುಣಿಸಿ ಫೈನಲ್‌ಗೆ ಪ್ರವೇಶಿಸಿದೆ.

ಮುಂಬೈ ತಂಡದಲ್ಲಿ ಸರ್ಫರಾಜ್‌ ಖಾನ್ ಪ್ರಚಂಡ ಫಾರ್ಮ್‌ನಲ್ಲಿದ್ದು, 5 ಪಂದ್ಯಗಳಲ್ಲಿ3 ಶತಕಗಳ ಸಹಿತ 803 ರನ್‌ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಪೃಥ್ವಿ ಶಾ ನೇತೃತ್ವದ ಮುಂಬೈ ತಂಡ ಈ ಆವೃತ್ತಿಯ 50 ಓವರ್‌ಗಳ ವಿಜಯ್ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದೀಗ 2 ಆವೃತ್ತಿಗಳ ನಂತರ ನಡೆಯುತ್ತಿರುವ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

ಇತ್ತ ಮಧ್ಯಪ್ರದೇಶ 1998-99ರ ನಂತರ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಹಿಮಾಂಶು ಮಂತ್ರಿ(165) ಮತ್ತು ಕುಮಾರ ಕಾರ್ತಿಕೇಯ 8 ವಿಕೆಟ್‌ ಪಡೆದು 24 ವರ್ಷಗಳ ಬಳಿಕ ತಮ್ಮ ರಾಜ್ಯ ತಂಡ ಫೈನಲ್ ಪ್ರವೇಶಿಸಲು ನೆರವಾಗಿದ್ದರು. ಈ ಆವೃತ್ತಿಯಲ್ಲಿ ಕಾರ್ತಿಕೇಯ 5 ಪಂದ್ಯಗಳಲ್ಲಿ 27 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಮುಂಬೈ-ಮಧ್ಯಪ್ರದೇಶ ನಡುವಿನ ಫೈನಲ್ ಪಂದ್ಯ ಜೂನ್ 22 ರಿಂದ -26ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯ ಬೆಳಿಗ್ಗೆ 9:30ಕ್ಕೆ ಆರಂಭಗೊಂಡಿದ್ದು, ಈ ಪಂದ್ಯ ಸ್ಟಾರ್‌ ಸ್ಪೋರ್ಟ್ಸ್‌ ನಲ್ಲಿ ನೇರಪ್ರಸಾರಗೊಳ್ಳಲಿದೆ. ಹಾಟ್‌ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.