‘ನವರಸ ನಾಯಕ’ ಜಗ್ಗೇಶ್ ಅಭಿನಯದ, ‘ಮಠ’ ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ‘ರಂಗನಾಯಕ’ ಸಿನಿಮಾ ಮಾರ್ಚ್ 8ಕ್ಕೆ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದಲ್ಲಿ ಜಗ್ಗೇಶ್ ಅವರ ತಾಯಿ ಪಾತ್ರದಲ್ಲಿ ನಟಿ ಚೈತ್ರಾ ಕೊಟ್ಟೂರು ನಟಿಸಿದ್ದಾರೆ.
‘ನವರಸ ನಾಯಕ’ ಜಗ್ಗೇಶ್ ಅಭಿನಯದ, ‘ಮಠ’ ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ‘ರಂಗನಾಯಕ’ ಸಿನಿಮಾ ಮಾರ್ಚ್ 8ಕ್ಕೆ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದಲ್ಲಿ ಜಗ್ಗೇಶ್ ಅವರ ತಾಯಿ ಪಾತ್ರದಲ್ಲಿ ನಟಿ ಚೈತ್ರಾ ಕೊಟ್ಟೂರು ನಟಿಸಿದ್ದಾರೆ.
ಚಿತ್ರತಂಡ ಇತ್ತೀಚೆಗೆ ‘ಎನ್ನ ಮನದರಸಿ’ ಎಂಬ ಶೀರ್ಷಿಕೆಯುಳ್ಳ ಚಿತ್ರದ ಹಾಡೊಂದನ್ನು ಬಿಡುಗಡೆಗೊಳಿಸಿತು. ಹಾಡಿನಲ್ಲಿ ಜಗ್ಗೇಶ್ ಮತ್ತು ರಚಿತಾ ಮಹಾಲಕ್ಷ್ಮಿ ಕಾಣಿಸಿಕೊಂಡಿದ್ದು, ಈ ಹಾಡಿಗೆ ಶಾರದಸುತ ಸಾಹಿತ್ಯ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ನಾಗರಾಜ್ ಅವರು ಹಾಡನ್ನು ಹಾಡಿದ್ದಾರೆ.
ಚೈತ್ರಾ ಕೊಟ್ಟೂರ್ ಅವರ ಪಾತ್ರದ ಕುರಿತು ಮಾತನಾಡಿದ ನಿರ್ದೇಶಕ ಗುರು ಪ್ರಸಾದ್ ಅವರು, “ಈ ಸಿನಿಮಾದಲ್ಲಿ ಜಗ್ಗೇಶ್ ಅವರ ತಾಯಿ ಪಾತ್ರ ಬರುತ್ತದೆ. ಅದಕ್ಕಾಗಿ ಒಬ್ಬ ನಟಿ ನಮಗೆ ಬೇಕಾಗಿದ್ದರು. ಅದೊಂಥರ ವಿಭಿನ್ನವಾದ ಪಾತ್ರ. ಯಾರಾದರೂ ವಯಸ್ಸಾದವರನ್ನೇ ಹುಡುಕೋಣ ಎಂದುಕೊಂಡೆವು. ಆದರೆ ಅವರು ನಮ್ಮ ಕಾಮಿಡಿಗೆ ಹೊಂದಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಬಂತು. ಕೊನೆಗೆ ಯುವತಿಯನ್ನೇ ತಾಯಿ ಪಾತ್ರಕ್ಕೆ ಸೆಲೆಕ್ಟ್ ಮಾಡುವುದು ಎಂದು ತೀರ್ಮಾನವಾಯ್ತು. ಆ ಪಾತ್ರಕ್ಕೆ ನ್ಯಾಯ ಒದಗಿಸುವಂತಹ ನಟಿ ಬೇಕು ಎಂದು ಹುಡುಕಲು ಹೊರಟಾಗ ನಮಗೆ ಚೈತ್ರಾ ಕೊಟ್ಟೂರು ಅವರು ಸಿಕ್ಕರು ಎಂದು ಹೇಳಿದರು.
ಕೆಲ ಸಮಯದ ಹಿಂದೆ ನಾನು ತುಂಬ ಸುದ್ದಿಯಾಗಿದ್ದೆ. ಆದರೆ, ನಾನು ಕಲಾವಿದೆ. ಕಲೆಗಾಗಿ ಬದುಕುತ್ತಿರುವವಳು. ನಿಜವಾದ ಚೈತ್ರಾ ಕೊಟ್ಟೂರು ಅಂದ್ರೆ ಏನು ಎಂಬುದನ್ನು ಸಾಬೀತು ಮಾಡಬೇಕಿತ್ತು. ಆ ಸಮಯದಲ್ಲಿ ನನ್ನ ಬೆಂಬಲವಾಗಿ ನಿಂತವರು, ಅವಕಾಶ ನೀಡಿದವರು ಗುರುಪ್ರಸಾದ್” ಎಂದು ಚೈತ್ರಾ ಅವರು ಹೇಳಿದರು.
“ಆ ಪಾತ್ರ ಈ ಪಾತ್ರ ಎಂದು ನೋಡಬೇಡ, ನೀನು ನಗಿಸು, ಈ ಪಾತ್ರದಿಂದ ನಿನಗೆ ತುಂಬ ಒಳ್ಳೆಯದಾಗತ್ತೆ ಎಂದು ಗುರು ಸರ್ ನನಗೆ ಧೈರ್ಯ ತುಂಬಿದರು. ಜಗ್ಗೇಶ್ ಅವರ ತಾಯಿ ಪಾತ್ರ ಎಂದಾಗ ನನಗೆ ಭಯ ಇತ್ತು. ಅದನ್ನು ಹೇಗೆ ಮಾಡುವುದು ಎಂಬ ಆತಂಕದಲ್ಲಿದ್ದೆ. ಸೆಟ್‌ಗೆ ಬಂದಾಗ ಭಯದಲ್ಲೇ ಇದ್ದ ನನಗೆ ಜಗ್ಗೇಶ್ ಸರ್ ತುಂಬ ಕಂಫರ್ಟ್ ಫೀಲ್ ನೀಡಿದರು. ತುಂಬ ತಮಾಷೆ ಮಾಡುತ್ತ, ನಗಿಸುತ್ತಿದ್ದರು. ಅವರ ಜೊತೆಗೆ ಕೆಲಸ ಮಾಡುವುದು ನನಗೆ ತುಂಬ ಖುಷಿಯಾಗುತ್ತದೆ. ಜಗ್ಗೇಶ್ ಅವರು ಎಲ್ಲ ಸಮಯದಲ್ಲೂ ವಾಸ್ತವದಲ್ಲಿ ಬದುಕುತ್ತಾರೆ” ಎಂದರು.