ಮನೆ ರಾಜ್ಯ ರಂಗಾಯಣ ಈಗ, ರಂಪಾಯಣವಾಗಿದೆ: ಆರ್.ಧ್ರುವನಾರಾಯಣ ಕಿಡಿ

ರಂಗಾಯಣ ಈಗ, ರಂಪಾಯಣವಾಗಿದೆ: ಆರ್.ಧ್ರುವನಾರಾಯಣ ಕಿಡಿ

0

ಮೈಸೂರು(Mysuru): ಅಡ್ಡಂಡ ಕಾರ್ಯಪ್ಪ ರಂಗಾಯಣದ ಜವಾಬ್ದಾರಿ ವಹಿಸಿಕೊಂಡ ನಂತರ  ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದು, ‘ರಂಗಾಯಣ’ವೀಗ ‘ರಂಪಾಯಣ’ವಾಗಿ ಮಾರ್ಪಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಕಿಡಿಕಾರಿದರು.

ಸ್ವಾಭಿಮಾನಿ ಹೋರಾಟ ವೇದಿಕೆಯಿಂದ ಇಲ್ಲಿನ ಓವೆಲ್‌ ಮೈದಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಂಗಾಯಣ ಸಂಸ್ಥೆಯೊಂದಿಗೆ ಕಳೆದ 20 ವರ್ಷಗಳೊಂದಿಗೆ ನನಗೆ ಒಡನಾಟವಿದೆ. ಜನಸಾಮಾನ್ಯರೊಂದಿಗೆ ಅರಿವು ಮೂಡಿಸಿ, ಸಮಾಜದಲ್ಲಿ ಬದಲಾವಣೆ, ಜಾಗೃತಿ ತರುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿತ್ತು. ಈಗ ಬೀದಿ, ಹಾದಿಗಳಲ್ಲಿ ರಂಪ ಮೂಡಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಚಂದ್ರಶೇಖರ ಕಂಬಾರರ ಕೃತಿ ಆಧರಿಸಿದ ‘ಸಾಂಬಶಿವ ಪ್ರಹಸನ’ ಅತ್ಯುತ್ತಮ ನಾಟಕವಾಗಿದ್ದು, ನಾಟಕದ ಒಳ್ಳೆಯ ಅಂಶಗಳನ್ನು ತಿರುಚಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ರಂಗಾಯಣದಲ್ಲಿ ನಾಟಕ ಪ್ರದರ್ಶಿಸಿದ್ದಾರೆ. ನಾಟಕ ಪ್ರದರ್ಶನದ ವೇಳೆಯೇ ಪ್ರತಿಭಟಿಸಿ, ನಾಟಕ ನಿಲ್ಲಿಸಿದ್ದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಒತ್ತಾಯಿಸಿದರು.

‘ಅನ್ನಭಾಗ್ಯ‘ ಯೋಜನೆ ಇಲ್ಲದಿದ್ದರೆ, ಕೋವಿಡ್‌ ಸಂದರ್ಭದಲ್ಲಿ ರಾಜ್ಯದಲ್ಲಿ ಸಾವಿರಾರು ಜನರು ಹಸಿವಿನಿಂದಲೇ ಸಾವನ್ನಪ್ಪುತ್ತಿದ್ದರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಸಿದ್ದರಾಮಯ್ಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು. ಅಂತಹ ಯೋಜನೆ ಜಾರಿಗೆ ತಂದವರ ವಿರುದ್ಧ ನಾಟಕದಲ್ಲಿ ಕೀಳುಮಟ್ಟದಲ್ಲಿ ಭಾಷೆ ಬಳಸಿರುವುದು ಖಂಡನೀಯ ಎಂದು ಎಚ್ಚರಿಕೆ ನೀಡಿದರು.

ಅಡ್ಡಂಡ ಕಾರ್ಯಪ್ಪ ಅವರ ಅಣಕು ಶವ ಪ್ರತಿಭಟನೆ

ಈ ವೇಳೆ ಪ್ರತಿಭಟನಕಾರರು ಅಡ್ಡಂಡ ಕಾರ್ಯಪ್ಪ ಅವರ ಅಣಕುಶವ ಪ್ರದರ್ಶಿಸಲು ಮುಂದಾದರು. ಇದಕ್ಕೆ ಪೊಲೀಸರು ತಡೆಯೊಡ್ಡಿದರು. ನಂತರ ಮೆರವಣಿಗೆ ಮೂಲಕ ತೆರಳಿ ರಂಗಾಯಣ ಆವರಣ ಪ್ರವೇಶಿಸಿ ಮುಂದಾದವರನ್ನು ತಡೆದರು. ಮುಂಜಾಗ್ರತ ಕ್ರಮವಾಗಿ ರಂಗಾಯಣದ ಸುತ್ತಲೂ ನಿಷೇಧಾಜ್ಞೆ ಹೇರಲಾಗಿತ್ತು.

ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್‌, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಎಂ.ಲಕ್ಷ್ಮಣ್, ಕುರುಬರ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಇದ್ದರು.